ಮಂಗಳೂರು : ನಗರದ ಕಂಕನಾಡಿ ಬಳಿ ಖೋಟಾ ನೋಟು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು ಆತನಿಂದ 8 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯದ ಮಂಜೇಶ್ವರದ ಪ್ರಶ್ವಿತ್ (25) ಬಂಧಿತ ಆರೋಪಿ.
ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು 500, 200 ರೂ. ಮತ್ತು 100 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ರೂ.ಗಳ ನಕಲಿ ನೋಟುಗಳನ್ನು ಚಲಾವಣೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಇನ್ನು ಆರೋಪಿಯಿಂದ ಒಟ್ಟು 2,200 ರೂ. ಮೌಲ್ಯದ 500 ರೂಪಾಯಿ ಮುಖಬೆಲೆಯ 3 ನೋಟುಗಳು, 200 ರೂ. ಮುಖಬೆಲೆಯ 2 ನೋಟುಗಳು ಹಾಗೂ 100 ರೂ. ಮುಖಬೆಲೆಯ 3 ನೋಟುಗಳು ಸೇರಿದಂತೆ 4,250 ರೂಪಾಯಿ ಅಸಲಿ ನೋಟು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : Fake Currency: ಬೆಂಗಳೂರಿನಲ್ಲಿ ನಿಲ್ಲದ ಖೋಟಾ ನೋಟು ಹಾವಳಿ: ಮೂವರು ಸೆರೆ
ಇತ್ತೀಚಿನ ಪ್ರಕರಣ: ಹಾಗೆಯೇ, ರಾಜಧಾನಿ ಬೆಂಗಳೂರಿನಲ್ಲಿ ಕೂಡ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದೆ. ಪೊಲೀಸರು ಖೋಟಾ ನೋಟಿನ ಜಾಲ ಭೇದಿಸಿ ಆರೋಪಿಗಳನ್ನು ಬಂಧಿಸುತ್ತಿದ್ದರೂ ಮತ್ತೆ ಮತ್ತೆ ಜಾಲ ವಿಸ್ತರಣೆಯಾಗುತ್ತಿದೆ. ಇತ್ತೀಚೆಗಷ್ಟೇ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಕೋಟಿ ಮೌಲ್ಯದ ಜೆರಾಕ್ಸ್ ನೋಟುಗಳು ಸಿಕ್ಕಿದ್ದವು. ಈ ಅಕ್ರಮದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಕಳೆದ ಜುಲೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರನ್ನು ತಮಿಳುನಾಡು ಮೂಲದ ಶರವಣನ್, ಕೇರಳದ ನಿತಿನ್ ಹಾಗೂ ದೇವನ್ ಎಂದು ಗುರುತಿಸಲಾಗಿತ್ತು. ದಾಳಿ ವೇಳೆ 500 ರೂ. ಮುಖಬೆಲೆಯ 6,53,500 ಬೆಲೆಯ 1,307 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.