ಮಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ದೇಶಕ್ಕೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ನಗರದ ಬಜಾಲ್, ಫೈಜಲ್ ನಗರ ನಿವಾಸಿ ತೌಸೀಫ್(27) ಬಂಧಿತ ಆರೋಪಿ ಎಂಬುದಾಗಿ ತಿಳಿದು ಬಂದಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ಗಲಾಟೆ, ದೊಂಬಿ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದನು. ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತ ಕಳೆದ 4 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ, ಪೊಲೀಸರಿಗೂ ಸಿಗದೇ ತಲೆಮರೆಸಿಕೊಂಡು ವಿದೇಶದಲ್ಲಿ ಅಡಗಿದ್ದನು. ಆದ್ದರಿಂದ ಈತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು.
ಅಕ್ಟೋಬರ್ 14ರಂದು ಈತನು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರಲು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈ ವೇಳೆ, ಮುಂಬೈನ ಇಮಿಗ್ರೇಷನ್ ಅಧಿಕಾರಿಗಳು ಈತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ತೌಸೀಫ್ಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಈತನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ.
8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೇರಿ ಇಬ್ಬರ ಬಂಧನ : ಕೊಲೆ, ಕೊಲೆ ಯತ್ನ, ಸುಲಿಗೆ ಹಾಗೂ ಡ್ರಗ್ಸ್ ದಂಧೆ ಸೇರಿ 16 ವಿವಿಧ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಎಂಟು ವರ್ಷಗಳಿಂದ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೇರಿ ಇಬ್ಬರನ್ನು ಕೆಂಗೇರಿ ಉಪವಿಭಾಗದ ಪೊಲೀಸರು (ಸೆಪ್ಟೆಂಬರ್ 2-2021) ಬಂಧಿಸಿದ್ದರು.
ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಳ್ಳಾಲ ಮೂಲದ ಹಮೀದ್ ಹಾಗೂ ಸಹೋದರ ಸಾದೀಕ್ ಬಂಧಿತರು. ಇವರಲ್ಲಿ ಹಮೀದ್ ಎಂಬಾತ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಬ್ಯಾಡರಹಳ್ಳಿಯಲ್ಲಿ ತಮ್ಮದೇ ನೇತೃತ್ವದಲ್ಲಿ ಸಹಚರರನ್ನು ಒಗ್ಗೂಡಿಸಿಕೊಂಡು ಹಲವು ವರ್ಷಗಳಿಂದ ಮಾದಕ ವಸ್ತುಗಳ ಮಾರಾಟದ ಅಕ್ರಮ ಜಾಲದಲ್ಲಿ ತೊಡಗಿಸಿಕೊಂಡಿದ್ದ. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ದಂಧೆಕೋರರಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ ನಗರ ಹೊರವಲಯದ ಮನೆಯೊಂದರಲ್ಲಿ ಡ್ರಗ್ಸ್ ಶೇಖರಿಸುತ್ತಿದ್ದ.
ಯುವ ಜನಾಂಗವನ್ನು ಗುರಿಯಾಗಿಸಿಕೊಂಡು ಗಾಂಜಾ ಸೇರಿ ವಿವಿಧ ರೀತಿಯ ಮಾದಕ ವಸ್ತುಗಳನ್ನು ಸಣ್ಣ - ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿಕೊಂಡು ಮಾರಾಟ ಮಾಡುತ್ತಿದ್ದ. ಇತ್ತೀಚಿನ ವರ್ಷಗಳಲ್ಲಿ ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್ ಚಟುವಟಿಕೆ ಹೆಚ್ಚಾಗಿದ್ದರಿಂದ ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸ್ಥಳೀಯರ ಕುಂದು ಕೊರತೆ ಆಲಿಸಿದಾಗ ಡ್ರಗ್ಸ್ ಚಟುವಟಿಕೆಗಳ ಬಗ್ಗೆ ದೂರು ಕೇಳಿ ಬಂದಿತ್ತು.
ಇದನ್ನೂ ಓದಿ: ಬೆಂಗಳೂರು: 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೇರಿ ಇಬ್ಬರ ಬಂಧನ