ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ತನ್ನ ತಾಯಿ ಜೊತೆ ಪರೀಕ್ಷೆ ಬರೆಯಲು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆಂಬ್ಯುಲೆನ್ಸ್ ಮೂಲಕ ಶಾಲೆಗೆ ಕರೆತಂದು ಪರೀಕ್ಷೆಗೆ ಕೂರಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಸಂಪಿಂಜಾ ನಿವಾಸಿ ತನ್ವಿ ತನ್ನ ತಾಯಿ ಮಮತಾ ಜೊತೆ ದ್ವಿಚಕ್ರ ವಾಹನದಲ್ಲಿ ಪರೀಕ್ಷಾ ಕೇಂದ್ರವಾದ ಬೆಳ್ತಂಗಡಿ ವಾಣಿ ಕಾಲೇಜ್ಗೆ ಬರುತ್ತಿದ್ದಳು. ಈ ವೇಳೆ ಅವರ ದ್ವಿಚಕ್ರವಾಹನ ಸ್ಕಿಡ್ ಆಗಿ ಪಲ್ಟಿಯಾಗಿದೆ. ಪರಿಣಾಮ ತಾಯಿ ಮಮತಾಗೆ ಯಾವುದೇ ಗಾಯವಾಗಿಲ್ಲವಾದರೂ ಮಗಳು ತನ್ವಿಗೆ ಗಾಯಗಳಾಗಿದ್ದವು.
ನಡೆದ ಘಟನೆ ಬಗ್ಗೆ ತಾಯಿ ತನ್ನ ಮಗಳ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಬಂದು ವಿಚಾರಿಸಿದ ಮಂಡಳಿಯವರು ಆಕೆಯನ್ನು ಶಾಲೆಗೆ ಕರೆದೊಯ್ದು ಪರೀಕ್ಷೆ ಬರೆಯುವ ಸಹಾಯಕಳಾಗಿ 9ನೇ ತರಗತಿ ವಿದ್ಯಾರ್ಥಿಯನ್ನು ನಿಯೋಜನೆ ಮಾಡಿದ್ದಾರೆ. ಈ ವೇಳೆ ತನ್ವಿ ಸ್ಟ್ರೆಚರ್ನಲ್ಲಿಯೇ ಮಲಗಿಕೊಂಡು 9ನೇ ತರಗತಿ ವಿದ್ಯಾರ್ಥಿನಿ ಮೂಲಕ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದಿದ್ದಾಳೆ. ಪರೀಕ್ಷೆ ಬರೆಸಿದ ನಂತರ ಅದೇ ಆಂಬ್ಯುಲೆನ್ಸ್ ಮೂಲಕ ಮತ್ತೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಆಡಳಿತ ಮಂಡಳಿ ಮಾನವೀಯತೆ ಮೆರೆದಿದೆ.