ಮೂಡಬಿದಿರೆ(ದಕ್ಷಿಣ ಕನ್ನಡ): ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಮೂಡುಬಿದಿರೆ ತಾಲೂಕಿನ ಕಾಂತವಾರ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿದೆ. ಮೂಡಬಿದಿರೆಯ ಮಹಾವೀರ ಕಾಲೇಜು ಬಳಿಯ ರಾಣಿಕೇರಿಯಲ್ಲಿ ವಾಸವಿದ್ದ ರಾಜೇಶ್ (28) ಸಾವನ್ನಪ್ಪಿದವರು. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನಿವಾಸಿ.
ರಾಜೇಶ್ ಅವರ ಅಜ್ಜಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಭಾನುವಾರ ಬೆಳಗ್ಗೆ ನಿಧನರಾಗಿದ್ದರು. ವಿಷಯ ತಿಳಿದು ರಾಜೇಶ್ ಬಾಳೆಹೊನ್ನೂರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಅಂತ್ಯ ಸಂಸ್ಕಾರ ಕಾರ್ಯಗಳೆಲ್ಲವನ್ನು ಮುಗಿಸಿ ತಡರಾತ್ರಿ ವೇಳೆ ಮನೆಗೆ ಹಿಂದಿರುಗುತ್ತಿದ್ದಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಜೇಶ್ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ.
ರಾಜೇಶ್ ಅವರು ಪತ್ನಿ ಮತ್ತು 5 ತಿಂಗಳ ಮಗುವನ್ನು ಅಗಲಿದ್ದಾರೆ. ಈ ಪ್ರಕರಣ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ಹಲ್ಲೆ