ಮಂಗಳೂರು: ಕೊರೊನಾ ಸೋಂಕಿತನಾಗಿ ಚಿಕಿತ್ಸೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಟ್ಕಳ ಮೂಲದ 22 ವರ್ಷದ ಯುವಕ ಪೂರ್ಣ ಗುಣಮುಖನಾಗಿರುವುದರಿಂದ ಇಂದು ಮನೆಗೆ ತೆರಳಿದ್ದಾನೆ.
ಬೆಳ್ಳಂಬೆಳಗ್ಗೆ ತನ್ನ ಊರಿನತ್ತ ಪಯಣ ಬೆಳೆಸುವ ಮೊದಲು ವೆನ್ಲಾಕ್ ಆಸ್ಪತ್ರೆಯಲ್ಲಿ ತಮಗೆ ಚಿಕಿತ್ಸೆ ನೀಡಿ ಕೊರೊನಾ ಸೋಂಕಿನಿಂದ ಗುಣಮುಖರಾಗಿಸಿದ್ದ ವೈದ್ಯರು, ದಾದಿಯರಿಗೆ ಕೃತಜ್ಞತೆ ಸಲ್ಲಿಸಿ, ಭಾವುಕನಾದ ಎಂದು ಮೂಲಗಳಿಂದ ತಿಳಿದು ಬಂದಿದೆ.
ದ.ಕ.ಜಿಲ್ಲೆಯ ಪ್ರಥಮ ಕೊರೊನಾ ಸೋಂಕಿತನಾಗಿರುವ ಈ ಯುವಕ ದುಬೈಯಲ್ಲಿ ಬ್ರ್ಯಾಂಡೆಡ್ ವಾಚ್ ವ್ಯಾಪಾರಿಯಾಗಿದ್ದ. ಈತ ಮಾರ್ಚ್ 19ರಂದು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಂದರ್ಭ ತಪಾಸಣೆ ಮಾಡಿದಾಗ ಕೊರೊನಾ ಲಕ್ಷಣಗಳಿರುವುದು ತಿಳಿದು ಬಂದಿತ್ತು. ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಆತನನ್ನು ದಾಖಲಿಸಲಾಯಿತು.
ಮಾರ್ಚ್ 22ರಂದು ಆತನ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ತಕ್ಷಣ ಐಸೋಲೇಷನ್ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ದಿನದಿಂದ ದಿನಕ್ಕೆ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಆತನ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಆತ ಸಂಪೂರ್ಣ ಗುಣಮುಖನಾಗಿರುವ ಬಗ್ಗೆ ವೈದ್ಯರು ಘೋಷಣೆ ಮಾಡಿರುವುದರಿಂದ ತನ್ನ ಮನೆಗೆ ತೆರಳಿದ್ದಾನೆ.
ತನಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಕೊರೊನಾ ಸೋಂಕು ನಮ್ಮ ದೇಹದಲ್ಲಿದೆ ಎಂಬುದು ತಿಳಿಯಲು ಸಾಕಷ್ಟು ದಿನ ಕಳೆಯುತ್ತದೆ. ಇದರಿಂದ ನಾವು ಓಡಾಟಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ್ ಮಾಡಿ ದಿಟ್ಟ ಹೆಜ್ಜೆ ಇಟ್ಟಿದೆ. ಸರ್ಕಾರದ ನಿರ್ದೇಶನದಂತೆ ಎಲ್ಲರೂ ಮನೆಯೊಳಗೆ ಇರುವುದು ಅಗತ್ಯವಾಗಿದೆ. ನಾನು ವಿಮಾನ ನಿಲ್ದಾಣದಿಂದಲೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿರೋದರಿಂದ ಕುಟುಂಬಸ್ಥರಿಗೆ, ಊರಿನವರಿಗೆ ರೋಗ ಹರಡೋದು ತಪ್ಪಿದಂತಾಗಿದೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಯುವಕ ಪ್ರತಿಕ್ರಿಯಿಸಿದ್ದಾನೆ.