ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಉದ್ಯಮಿಯೋರ್ವ ಯುಎಇನ ಗೋಲ್ಡನ್ ವೀಸಾ ಪಡೆದಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಗೋಲ್ಡನ್ ವೀಸಾ ವಿಶೇಷ ಸ್ಥಾನಮಾನವಿರುವ ವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುತ್ತದೆ. ಇದೀಗ ಯುಎಇ ಯ ಗೋಲ್ಡನ್ ವೀಸಾ ಪಡೆದವರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾನ ಗ್ರಾಮದ ವ್ಯಕ್ತಿ ಸೇರ್ಪಡೆಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಉದ್ಯಮಿ ಮಹಮ್ಮದ್ ಇಸಾಕ್ ಕುಂಞ (40) ಯುಎಇಯ ಗೋಲ್ಡನ್ ವೀಸಾ ಪಡೆದಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿದ್ದು, 2022 ಜನವರಿ 25 ರಂದು ಗೋಲ್ಡನ್ ವೀಸಾ ಪಡೆದಿದ್ದಾರೆ. ಈ ವೀಸಾ 2032 ರ ಜ. 24 ಕ್ಕೆ ರಿನ್ಯುವಲ್ ಆಗಲಿದೆ.
ಇದನ್ನೂ ಓದಿ: ಭಾರತದಿಂದ ಆಫ್ಘಾನಿಸ್ತಾನಕ್ಕೆ ನೆರವು : 2 ಸಾವಿರ ಮೆಟ್ರಿಕ್ ಟನ್ ಗೋಧಿ ರವಾನೆ
ಇವರು ಯುಎಇಯಲ್ಲಿ ಉದ್ಯಮ ನಡೆಸಿಕೊಂಡು ಆ ಮೂಲಕ ಯುಎಇ ಸರ್ಕಾರದ ಗಮನ ಸೆಳೆದಿದ್ದರು. ಇವರು ಕೇವಲ 10 ವರ್ಷದಲ್ಲಿ ಯುಎಇಯಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಮಹಮ್ಮದ್ ಇಸಾಕ್ 2006 ರಲ್ಲಿ ಪದವಿ ಪೂರೈಸಿ ದುಬೈಗೆ ತೆರಳಿ ಅಲ್ಲಿ 6 ವರ್ಷ ಅರೇಬಿಯನ್ ಪ್ರಿಂಟಿಂಗ್ ಸಂಸ್ಥೆಯೊಂದರಲ್ಲಿ ಎಕ್ಸಿ ಕ್ಯೂಟಿವ್ ಆಗಿ ದುಡಿದಿದ್ದರು. ಪ್ರಿಂಟಿಂಗ್ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಿ 2012 ರಲ್ಲಿ ಸಹರಾ ಪ್ರಿಂಟಿಂಗ್ ಪಬ್ಲಿಶಿಂಗ್ ಆ್ಯಂಡ್ ಡಿಸ್ಟ್ಎಲ್ಎಲ್ಸಿ ಸ್ಥಾಪಿಸಿ, ಹಂತಹಂತವಾಗಿ ಬೆಳೆದು ಬಳಿಕ ನಾಲ್ಕು ಕಂಪನಿಗಳನ್ನು ಆರಂಭಿಸಿದರು.
ಇದೀಗ ಗೋಲ್ಡನ್ ವೀಸಾ ಪಡೆದಿರುವ ಇವರಿಗೆ ಇನ್ನೊಬ್ಬರು ಪ್ರಾಯೋಜಕರ ಅಗತ್ಯವಿಲ್ಲದೆ ಇರುವುದರಿಂದ ಉದ್ಯಮದಲ್ಲಿ ಶೇ.100 ಮಾಲೀಕತ್ವ ಅವರದ್ದಾಗಲಿದೆ.