ಕಡಬ: ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಗರ್ಭಿಣಿಯೋರ್ವರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕುಟ್ರುಪ್ಪಾಡಿಯಲ್ಲಿ ನಡೆದಿದೆ.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಕಳಾರ ಅಡ್ಕಾಡಿ ನಿವಾಸಿ ದಿನೇಶ್ ಎಂಬುವರ ಪತ್ನಿಯನ್ನು ಹೆರಿಗೆ ನೋವಿನ ಹಿನ್ನೆಲೆ ಕಡಬದ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಇಲ್ಲಿ ಹೆರಿಗೆ ಮಾಡಲು ಆಗುವುದಿಲ್ಲ ಎಂದು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಕೂಡಲೇ ಇವರನ್ನು ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ಕೊಂಡೊಯ್ಯುವ ವೇಳೆ ಮಾಣಿ ಸಮೀಪ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿದ್ದು ಇದೀಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.