ಪುತ್ತೂರು: ಅನ್ಯಕೋಮಿನ ಪುರುಷರೊಂದಿಗೆ ಮಹಿಳೆಯೊಬ್ಬರು ಲಾಡ್ಜ್ನಲ್ಲಿ ತಂಗಿರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲಾಡ್ಜ್ ಮೇಲೆ ದಾಳಿ ನಡೆಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರ ಮೇಲೆ ಹಲ್ಲೆ ಎಸಗಿರುವುದಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ಕಳೆದ ಎರಡು ದಿನಗಳಿಂದ ಬೆಂಗಳೂರು ಮೂಲದ ಮಹಿಳೆ ತಂಗಿದ್ದರು. ಸೆಪ್ಟಂಬರ್ 17 ರಂದು ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದು, ಸೆಪ್ಟಂಬರ್ 18 ರಂದು ಪುತ್ತೂರಿಗೆ ತಲುಪಿ ಲಾಡ್ಜ್ನಲ್ಲಿ ತಂಗಿದ್ದರು. ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಕಾರನ್ನು ಬಿಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದ ಈ ಮಹಿಳೆಯ ಜೊತೆ ಆಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಉಳ್ಳಾಲ ಮತ್ತು ಬೆಂಗಳೂರಿನ ಕೊಟ್ಟಿಗೇರಿ ನಿವಾಸಿಗಳಿಬ್ಬರು ಸಹ ಆಗಮಿಸಿದ್ದರು.
ಮಹಿಳೆಯ ಜೊತೆ ಅನ್ಯಕೋಮಿನ ಪುರುಷರು ಲಾಡ್ಜ್ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೆಪ್ಟಂಬರ್ 20 ರಂದು ತಡರಾತ್ರಿ ಲಾಡ್ಜ್ ಮೇಲೆ ದಾಳಿ ಮಾಡಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ಸುಮಾರು 10 ರಿಂದ 15 ಜನರಿದ್ದ ಗುಂಪು ಲಾಡ್ಜ್ ಮುಂಭಾಗದಲ್ಲಿ ಸೇರಿದ್ದು, ಇದರಲ್ಲಿ ನಾಲ್ಕೈದು ಜನರ ಗುಂಪು ಲಾಡ್ಜ್ಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಸಹೋದ್ಯೋಗಿಗಳು ತಂಗಿದ್ದ ರೂಂಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೂ ಮಾಹಿತಿ ನೀಡಿದ್ದು, ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರನ್ನು ಪೊಲೀಸ್ ಠಾಣೆಗೆ ಕರೆಸಿ ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹಲ್ಲೆ ಮಾಡಿದವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಹಾಗೂ ಇತರ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಾಡ್ಜ್ಗಳಲ್ಲಿ ತಂಗಲು ಬರುವವರ ಸರಿಯಾದ ವಿಳಾಸ ಹಾಗೂ ಗುರುತು ಪತ್ರವನ್ನು ಪರಿಶೀಲನೆ ನಡೆಸಲಾಗುತ್ತಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ. ಇದರಿಂದಾಗಿ ಲಾಡ್ಜ್ಗಳಲ್ಲಿ ತಂಗಲು ಬರುವ ಜನರು ಕೆಲವು ಕಾನೂನು ಬಾಹಿರ ಕೃತ್ಯಗಳಲ್ಲೂ ತೊಡಗುತ್ತಿದ್ದಾರೆ. ಇದು ಸಾಮಾಜದ ಸ್ವಾಸ್ತ್ಯಕ್ಕೂ ಧಕ್ಕೆಯುಂಟಾಗುತ್ತಿದೆ. ಇದರಿಂದಾಗಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆರೋಪಿಸಿವೆ.
ಇದನ್ನೂ ಓದಿ: ಸದನದಲ್ಲಿ ಸದ್ದು ಮಾಡಿದ ಮತಾಂತರ ವಿಷಯ.. ಕಡಿವಾಣಕ್ಕೆ ಕಠಿಣ ಕಾನೂನು ತರಲು ಸರ್ಕಾರದ ಚಿಂತನೆ