ಮಂಗಳೂರು: ಬೆಳ್ತಂಗಡಿ ಗ್ರಾಮದಲ್ಲಿ ನೆರೆ ಹಾನಿಗೆ ಇಲ್ಲಿನ ಸಹೃದಯಿ ರಿಕ್ಷಾ ಚಾಲಕರೊಬ್ಬರು 1 ಲಕ್ಷ ಹಣವನ್ನು ನೆರೆ ಪರಿಹಾರ ನಿಧಿಗೆ ನೀಡುವ ಮೂಲಕ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ.
ಬೆಳ್ತಂಗಡಿಯ ಆಟೋ ಚಾಲಕ ನಿಡ್ಲೆ ಗ್ರಾಮದ ಮೇರ್ಲ ಮನೆಯ ಎಂ ಹೊನ್ನಪ್ಪ ಗೌಡ ಅವರು ಈ ಕೊಡುಗೆ ನೀಡಿದ್ದಾರೆ. ಆಗಸ್ಟ್ 12 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಚೇರಿಗೆ ಬಂದಿದ್ದ ಅವರು 1 ಲಕ್ಷ ರೂ. ಹಣವನ್ನು ತಂದು ನೀಡಿದ್ದಾರೆ. ಶಾಸಕರು ಆ ಸಂದರ್ಭದಲ್ಲಿ ಇರದ ಕಾರಣ ಶಾಸಕರ ಪರವಾಗಿ ಕಚೇರಿ ಸಹಾಯಕ ರವಿ ಮತ್ತು ನಂದಕುಮಾರ್ ಅವರು ಈ ಹಣವನ್ನು ಸ್ವೀಕರಿಸಿದ್ದರು.
ಹೊನ್ನಪ್ಪ ಗೌಡರ ಕೊಡುಗೆಯನ್ನು ಫೇಸ್ಬುಕ್ ಪೋಸ್ಟ್ ಮಾಡಿರುವ ಶಾಸಕ ಹರೀಶ್ ಪೂಂಜಾ ಅವರು "ನಿಡ್ಲೆ ಗ್ರಾಮದ ಮೇರ್ಲ ಮನೆ ನಿವಾಸಿ ಹೊನ್ನಪ್ಪ ಗೌಡರು 1 ಲಕ್ಷ ರೂ. ದೇಣಿಗೆ ನೀಡಿದರು. ಶ್ರಮಿಕ ಕಚೇರಿಗೆ ಎಪ್ಪತ್ತೈದರ ಹರೆಯದ ಹಿರಿಯರೊಬ್ಬರು ಖಾಕಿ ಬಟ್ಟೆ ಧರಿಸಿಕೊಂಡು ಬಂದು, ಕಚೇರಿ ಸಿಬ್ಬಂದಿಯಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡುವ ಸಂಬಂಧ ಚರ್ಚಿಸಿ ಕೊನೆಗೆ ತಾನು ನೀಡುವ ದೇಣಿಗೆ ಸಂತ್ರಸ್ತರಿಗೆ ಉಪಯೋಗವಾಗಬೇಕು. ತನ್ನ ತಾಲೂಕಿಗೆ ಪ್ರಯೋಜನವಾಗಲೆಂಬ ಕಾಳಜಿಯಿಂದ ದೇಣಿಗೆ ನೀಡಿದರು. ಹೊನ್ನಪ್ಪ ಗೌಡರು ನಿಜವಾಗಿಯೂ ಹೆಸರಿಗೆ ತಕ್ಕಂತೆ ಹೊನ್ನಿನಂತವರು ಎಂದು ಶ್ಲಾಘಿಸಿದ್ದಾರೆ.