ಬೆಳ್ತಂಗಡಿ: ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ 26 ವರ್ಷಗಳ ಬಳಿಕ ಕುಟುಂಬವನ್ನು ಸೇರಿದ್ದಾರೆ. ಈ ಮೂಲಕ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆ ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದೆ. ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆಯ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆ ಸೇರಿದವರು. ಶಿವಪ್ಪ ಅವರು 20 ವರ್ಷ ವಯಸ್ಸಿದ್ದಾಗ ಮನೆ ತೊರೆದಿದ್ದರು. ಇದೀಗ ಅವರಿಗೆ 46 ವರ್ಷ ವಯಸ್ಸಾಗಿದ್ದು, ಅಂದರೆ 26 ವರ್ಷಗಳ ಬಳಿಕ ಮರಳಿ ಮನೆ ಸೇರಿದ್ದಾರೆ.
ಹೊಟೇಲ್ ಕೆಲಸಕ್ಕೆ ಸೇರಿದ್ದ ಶಿವಪ್ಪ:
ಶಿವಪ್ಪ ಪೂಜಾರಿಯವರು ತಮ್ಮ20ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದರು. ಬಡತನದಿಂದ ಮನೆ ಬಿಟ್ಟು ಹೋಗಿದ್ದ ಅವರು ಆರಂಭದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಈ ವೇಳೆ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಉದ್ಯೋಗ ಅರಸುತ್ತಾ ತರಿಕೆರೆ, ಮೈಸೂರು ಕಡೆ ಹೋಗಿ ಮನೆಮಂದಿ ಸಂಪರ್ಕಕ್ಕೆ ಸಿಗದೆ ಹೋಗಿದ್ದರು. ಹುಡುಕಾಟ ನಡೆಸಿದರೂ ಮಗ ಸಿಕ್ಕಿರಲಿಲ್ಲ. ಮಗ ಮರಳುತ್ತಾನೆ ಎಂಬ ನಿರೀಕ್ಷೆಯನ್ನೇ ಕಳೆದುಕೊಂಡಿದ್ದರು.
ಊರಿನ ಯುವಕರ ನೆರವು:
ಪ್ರಸ್ತುತ ಮೈಸೂರಿನ ಹೋಟೆಲೊಂದರಲ್ಲಿ ಬಾಣಸಿಗನಾಗಿ ಕರ್ತವ್ಯನಿರ್ವಹಿಸುತ್ತಿದ್ದ ಶಿವಪ್ಪ ಅವರು ತರೀಕೆರೆಯ ಮೀನಾಕ್ಷಿಯವರೊಂದಿಗೆ ವಿವಾಹವಾಗಿದ್ದೇನೆ ಎಂದು ಹೇಳುತ್ತಿದ್ದು, ಪುತ್ರ ಪ್ರಸನ್ನ ಕುಮಾರ್, ಮಗಳು ಪ್ರಾರ್ಥನಾರೊಂದಿಗೆ ವಾಸ್ತವ್ಯವಿದ್ದರಂತೆ. ಇದೀಗ ಲಾಕ್‌ಡೌನ್ ಘೋಷಣೆಯಾಗಿದ್ದು, ಮೈಸೂರಿನಲ್ಲಿ ಹೋಟೆಲುಗಳು ಮುಚ್ಚಿರುವುದರಿಂದ ಲಾರಿಯಲ್ಲಿ ಬಂಟ್ವಾಳಕ್ಕೆ ಬಂದಿದ್ದರು.
ಬಂಟ್ವಾಳ ಸಮೀಪದ ಮಾರಿಪಳ್ಳ ಬಸ್ ನಿಲ್ದಾಣದಲ್ಲಿ ಶಿವಪ್ಪ ಪೂಜಾರಿಯವರು ಅಸ್ವಸ್ಥಗೊಂಡು ಬಿದ್ದಿದ್ದರು. ತಕ್ಷಣ ಸ್ಥಳೀಯರು ಆರೈಕೆ ಮಾಡಿ ಊಟ ಕೊಡಿಸಿ ಮನೆ ವಿಚಾರಿಸುವಾಗ ಬೆಳಾಲಿನಲ್ಲಿರುವ ತಮ್ಮ ಮನೆಯವರ ಬಗ್ಗೆ ತಿಳಿಸಿದ್ದರು. ತಕ್ಷಣ ಸ್ಥಳೀಯರೊಬ್ಬರು ವಾಟ್ಸ್ಆಪ್ನಲ್ಲಿ ಇವರ ವಿವರ, ಫೋಟೊ ಹಾಕಿದ್ದರು. ವಾಟ್ಸ್ಆಪ್ ಬಳಗದಲ್ಲಿ ಬೆಳಾಲಿನ ಯುವಕರು ಮನೆಮಂದಿಯನ್ನು ಸಂಪರ್ಕಿಸಿದಾಗ ಕಾಣೆಯಾಗಿದ್ದ ವಿಚಾರ ಖಾತ್ರಿಯಾಗಿತ್ತು.
ತಕ್ಷಣವೇ ಯುವಕರಾದ ತಾರಿದಡಿ ಆದಂ, ಆದರ್ಶ ನಗರದ ಉಸ್ಮಾನ್, ಕಬೀರ್, ಪರಂಗಿಪೇಟೆಯ ಮುಸ್ತಫ್ ಕೌಸರಿ ಅವರು ಮೇ 6ರಂದು ಶಿವಪ್ಪ ಅವರನ್ನು ಮನೆಗೆ ಕರೆದುಕೊಂಡು ಕುಟುಂಬವನ್ನು ಸೇರಿಸಿದ್ದಾರೆ.
ಶಿವಪ್ಪ ಅವರ ತಂದೆ, ತಾಯಿ ಇಬ್ಬರೂ ಮೂರು ತಿಂಗಳ ಹಿಂದೆ ಮೃಪಟ್ಟಿದ್ದಾರೆ. ಇವರಿಗೆ ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದು ಈಗ ಹಳೇ ಮನೆಯಲ್ಲಿ ಸಹೋದರನೊಂದಿಗೆ ವಾಸವಿದ್ದಾರೆ. ಕೋವಿಡ್ ಕಾರಣದಿಂದ ಪ್ರತ್ಯೇಕ ವಾಸ್ತವ್ಯ ಕಲ್ಪಿಸಿದ್ದಾರೆ. ಕಳೆದ 26 ವರ್ಷಗಳಿಂದ ನಾಪತ್ತೆಯಾಗಿದ್ದ ಮನೆ ಮಗ ಮರಳಿರುವ ಸಂತೋಷದಲ್ಲಿ ಕುಟುಂಬವಿದ್ದು, ಇತ್ತ ಶಿವಪ್ಪ ಅವರು ಮನೆ ಮಂದಿಯೊಂದಿಗೆ ಸಂತೋಷವಾಗಿ ಸಮಯ ಕಳೆಯುತ್ತಿದ್ದಾರೆ.