ಬೆಳ್ತಂಗಡಿ/ದಕ್ಷಿಣ ಕನ್ನಡ: ಜಾಗ ವಿವಾದದ ಗಲಾಟೆಯೊಂದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ನಡೆದಿದೆ.
ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಈ ಕೊಲೆ ನಡೆದಿದ್ದು, ಉಮೇಶ್ ಸಮಗಾರ (50) ಎಂಬುವವರು ಕೊಲೆಯಾಗಿದ್ದಾರೆ. ತಂದೆ ಹಾಗೂ ಮಗ ಸೇರಿ ಈ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಆರೋಪಿಗಳಾದ ತಂದೆ ಯೋಗೀಶ್ ಹಾಗೂ ಅವರ ಮಗ ಜೀವನ್ ಬಂಧಿತರು.
ಕೊಲೆಯಾದ ಉಮೇಶ್ ಸಮಗಾರ ಅವರಿಗೆ ನಿನ್ನೆ ರಾತ್ರಿ ಸಂಬಂಧಿಗಳಾದ ಯೋಗೀಶ್ ಮತ್ತು ಜೀವನ್ ರ ಜೊತೆಗೆ ಜಾಗದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ಯೋಗೀಶ್ ಮತ್ತು ಜೀವನ್ ಅವರು ಉಮೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮಧ್ಯರಾತ್ರಿ ಸುಮಾರು 2.30ರ ಸುಮಾರಿಗೆ ಉಮೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆರೋಪಿಗಳಿಬ್ಬರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.