ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಮತ್ತೆ ಎಂಟು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. 218 ಮಂದಿಗೆ ಸೋಂಕು ದೃಢಪಟ್ಟಿದೆ.
ಮೃತರೆಲ್ಲರೂ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ವಿವಿಧ ರೋಗದಿಂದ ಬಳಲುತ್ತಿದ್ದರು. ಇಂದು ಮೃತಪಟ್ಟವರಲ್ಲಿ ಕಾಸರಗೋಡಿನ ಮಹಿಳೆಯೋರ್ವರನ್ನು ಬಿಟ್ಟರೆ ಉಳಿದವರು ಮಂಗಳೂರಿನವರಾಗಿದ್ದಾರೆ.
ಮೃತರ ಪೈಕಿ 67 ವರ್ಷದ ವೃದ್ಧ ಬಹು ಅಂಗಾಗ ವೈಫಲ್ಯದಿಂದ ಹಾಗೂ ವೈರಾಣು ಸೋಂಕಿನಿಂದ ಬಳಲುತ್ತಿದ್ದರೆ, 78 ವರ್ಷದ ವೃದ್ಧರೋರ್ವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. 88 ವರ್ಷದ ವೃದ್ಧರೋರ್ವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. 68 ವರ್ಷದ ವೃದ್ಧ ಬಹು ಅಂಗಾಂಗ ವೈಫಲ್ಯಕ್ಕೆ ಈಡಾಗುವ ಸೆಪ್ಟಿಕ್ ಶಾಕ್ ನಿಂದ ಬಳಲುತ್ತಿದ್ದರು. 75 ವರ್ಷದ ವ್ಯಕ್ತಿ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರೆ, 76 ವರ್ಷದ ವೃದ್ಧೆ ಶ್ವಾಸಕೋಶದ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. 53 ವರ್ಷದ ವೃದ್ಧೆ ಬಹು ಅಂಗಾಂಗ ವೈಫಲ್ಯ, ಹೃದಯ ಸಂಬಂಧಿ ರೋಗ, ಮಧುಮೇಹದಿಂದ ಬಳಲುತ್ತಿದ್ದು, ಇದೀಗ ಈ 8 ಮಂದಿಯೂ ಮೃತಪಟ್ಟಿದ್ದಾರೆ.
ಇನ್ನೂ, ಜಿಲ್ಲೆಯಲ್ಲಿ ಇಂದು 218 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ ಪ್ರಾಥಮಿಕ ಸೋಂಕಿನಿಂದ 46 ಮಂದಿಗೆ ಸೋಂಕು ತಗುಲಿದ್ದು, ಐಎಲ್ಐ ಪ್ರಕರಣದಲ್ಲಿ 87 ಮಂದಿ ಮತ್ತು ಎಸ್ಆರ್ಐ ಪ್ರಕರಣದಲ್ಲಿ 15 ಮಂದಿಗೆ ಸೋಂಕು ಪತ್ತೆಯಾಗಿದೆ. ಉಳಿದ 70 ಮಂದಿಗೆ ಹೇಗೆ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಇಂದು 140 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 32,822 ಮಂದಿಯ ಗಂಟಲು ದ್ರವ ತಪಾಸಣೆ ಮಾಡಲಾಗಿದ್ದು, 28,210 ಮಂದಿಯಲ್ಲಿ ನೆಗೆಟಿವ್ ವರದಿ ಬಂದಿದೆ. 4,612 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಇವರಲ್ಲಿ ಒಟ್ಟು 2,127 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು, 2,370 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.