ಮಂಗಳೂರು: ನಗರದ ಬಜಿಲಕೇರಿಯಲ್ಲಿ ಜುಲೈ 13 ರಂದು ನಡೆದ ಮಾರಕಾಸ್ತ್ರ ದಾಳಿ ಪ್ರಕರಣದಲ್ಲಿ ಬಂಧಿತರಾಗಿರುವ 8 ಆರೋಪಿಗಳಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮರುದಿನ 11 ಮಂದಿಯನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದರು. ಅಂದು ಆರೋಪಿಗಳ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ರವಾನಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು, ಎಂಟು ಮಂದಿ ಆರೋಪಿಗಳಲ್ಲಿ ಸೋಂಕು ದೃಢಗೊಂಡಿದೆ. ಇದೀಗ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಬಂದರು ಠಾಣೆಯ ಪೊಲೀಸರಿಗೂ ಕಂಟಕ ಎದುರಾಗಿದೆ. ಆದ್ದರಿಂದ ಕಾರ್ಯಾಚರಣೆಯ ತಂಡದಲ್ಲಿದ್ದ ಎಲ್ಲಾ ಪೊಲೀಸರು ಕ್ವಾರಂಟೈನ್ಗೆ ಒಳಗಾಗುವ ಸಾಧ್ಯತೆ ಇದೆ.
ಗ್ರಾ.ಪಂ ಸದಸ್ಯರ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಕೊರೊನಾ :
ಇತ್ತೀಚೆಗೆ ಗ್ರಾ.ಪಂ ಸದಸ್ಯರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಮೂವರು ಆರೋಪಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೂವರು ಆರೋಪಿಗಳ ಬಂಧನದ ಬಳಿಕ ಅವರ ಗಂಟಲ ದ್ರವದ ಮಾದರಿಯನ್ನು ಕೋವಿಡ್ ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಆ ವರದಿಯು ಶುಕ್ರವಾರ ಬಂದಿದ್ದು, ಬಂಧಿತ ಮೂವರೂ ಆರೋಪಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಆರೋಪಿಗಳನ್ನು ಬಂಧನ ಪ್ರಕ್ರಿಯೆಗೆ ಒಳಪಡಿಸಿರುವ ಪೊಲೀಸರಿಗೂ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಸೋಂಕಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದ ಎಲ್ಲ ಪೊಲೀಸರ ಗಂಟಲು ದ್ರವ ಮಾದರಿಯನ್ನು ಶನಿವಾರ ಸಂಗ್ರಹಿಸಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಗ್ರಾಮಾಂತರ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.