ಬಂಟ್ವಾಳ: ಆಂಗ್ಲ ಭಾಷಾ ವ್ಯಾಮೋಹಿಗಳು ಹೆಚ್ಚಿರುವ ಈ ದಿನಗಳಲ್ಲಿ ತಮ್ಮೂರಿನ ಭಾಷೆ ತುಳು ಲಿಪಿಯನ್ನು ಕಲಿಯುವ ಆಸಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. 72ರ ಹರೆಯದ ವೃದ್ಧೆಯೋರ್ವರು ತುಳು ಲಿಪಿಯ ಪರೀಕ್ಷೆ ಬರೆಯುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ನಾಲ್ಕು ಭಾನುವಾರಗಳಲ್ಲಿ ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ವ್ಯಾಯಾಮ ಶಾಲೆಯಲ್ಲಿ ತುಳು ಲಿಪಿ ಉಚಿತ ತರಬೇತಿ ನಡೆದಿದೆ. ತುಳು ಸಾಹಿತ್ಯ ಅಕಾಡೆಮಿ, ಯುವಜನ ವ್ಯಾಯಾಮ ಶಾಲೆ ಭಂಡಾರಬೆಟ್ಟು ಸಹಯೋಗದಲ್ಲಿ ಜೈ ತುಳು ಸಂಘಟನೆ ಇದನ್ನು ನಡೆಸಿಕೊಡುತ್ತಿದೆ.
ಇಲ್ಲಿಗೆ ಆಗಮಿಸಿದ ಸುಮಾರು 35 ಆಸಕ್ತರಲ್ಲಿ 30 ಮಂದಿ ಈ ಭಾನುವಾರ ಪರೀಕ್ಷೆಯನ್ನು ಬರೆದಿದ್ದು, ಇವರಲ್ಲಿ 72 ವರ್ಷದ ನಿವೃತ್ತ ಶಿಕ್ಷಕಿ ಎನ್.ಬಿ. ಲಕ್ಷ್ಮೀ ಅವರು ಆಸಕ್ತಿಯಿಂದ ತುಳು ಲಿಪಿ ಬರೆದು ಇತರರ ಗಮನ ಸೆಳೆದರು.
ಬಲೆ ತುಳು ಕಲ್ಪುಗ ಎಂಬ ಹೆಸರಿನಲ್ಲಿ ನಾಲ್ಕು ವಾರಗಳ ಕಾಲ ತುಳು ಲಿಪಿ ತರಬೇತಿ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಆನ್ಲೈನ್ ಕ್ಲಾಸ್ ಮೂಲಕ ತರಬೇತಿ ಪಡೆದಿದ್ದ ಲಕ್ಷ್ಮೀ ಅಮ್ಮ, ಇಂದು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದರು.
ಇದನ್ನೂ ಓದಿ: ಆನ್ಲೈನ್ ಮೂಲಕ ಉಚಿತ ತುಳುಲಿಪಿ ತರಗತಿ: ಜೈ ತುಳುನಾಡು ಸಂಘಟನೆಯಿಂದ ವಿಶಿಷ್ಟ ಪ್ರಯತ್ನ
ಈ ಕುರಿತು ಪ್ರತಿಕ್ರಿಯಿಸಿರುವ ತುಳು ಲಿಪಿ ಶಿಕ್ಷಕಿ ಪೂರ್ಣಿಮಾ ಬಂಟ್ವಾಳ, ಈಗಾಗಲೇ ಬಂಟ್ವಾಳ ತಾಲೂಕಿನ ಕೆದಿಲ, ಪೆರ್ನೆಗಳಲ್ಲಿ ಇದೇ ರೀತಿ ತರಬೇತಿಗಳನ್ನು ನಾವು ಉಚಿತವಾಗಿ ನೀಡುತ್ತಿದ್ದೇವೆ. ಕೆದಿಲದಲ್ಲಿ 38, ಪೆರ್ನೆಯಲ್ಲಿ 25 ಮಂದಿ ಭಾಗವಹಿಸಿದ್ದರು. ಅದೇ ರೀತಿ ಭಂಡಾರಬೆಟ್ಟಿನಲ್ಲಿ 30 ಮಂದಿ ಪರೀಕ್ಷೆ ಬರೆದಿದ್ದಾರೆ. ಉಡುಪಿ ಕಡೆಯಲ್ಲಿ ಹಿರಿಯ ನಾಗರಿಕರು ಉತ್ಸಾಹ ತೋರುತ್ತಿದ್ದು, ಬಂಟ್ವಾಳದಲ್ಲೂ ಉತ್ಸಾಹಿಗಳು ಆಗಮಿಸುತ್ತಿರುವುದು ಗಮನಾರ್ಹ ಎಂದರು. ಜೈ ತುಳುನಾಡು ಸಂಘಟನೆಯಿಂದ ಶಿಕ್ಷಕರನ್ನು ತರಬೇತಿ ಮಾಡಲಾಗುತ್ತದೆ. ಆನ್ಲೈನ್ ನಲ್ಲಿ ತರಬೇತಿ ವ್ಯವಸ್ಥೆ ಇದೆ. ಸುಳ್ಯದಿಂದ ಜಗದೀಶ ಗೌಡ ಮತ್ತು ಬಬಿತಾ ಗೌಡ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.