ಮಂಗಳೂರು: ನಗರದ ಬಜ್ಪೆ ಹಳೆಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ 5 ಮೆಟಲ್ ಸ್ಪ್ರಾಕೆಟ್ ಗಳ ಮೂಲಕ ಮರೆಮಾಡಿ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನವನ್ನು ಜಾರಿ ನಿರ್ದೇಶನಾಲಯದ ಕಂದಾಯ ಗುಪ್ತಚರ (ಡಿಆರ್‌ಐ) ಬೆಂಗಳೂರು ಮತ್ತು ಮಂಗಳೂರಿನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಡುಪಿಯ ಸ್ವರೂಪ್ ಮಿನರಲ್ ಪ್ರೈ. ಲಿಮಿಟೆಡ್ ನ ಮನೋಹರ್ ಕುಮಾರ್ ಪೂಜಾರಿಯವರನ್ನು ಡಿಆರ್‌ಐ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಳ್ಳಸಾಗಣೆಯ ಲಾಜಿಸ್ಟಿಕ್ಸ್ ನೋಡಿಕೊಳ್ಳುತ್ತಿರುವ ಅಶೋಕನಗರ ಮೂಲದ ಲೋಹಿತ್ ಶ್ರೀಯಾನ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
ಕಳ್ಳಸಾಗಣೆ ಮಾಡಿರುವ ಚಿನ್ನವನ್ನು "ಗಣಿಗಾರಿಕೆ ಕನ್ವೇಯರ್ ಡ್ರೈವ್ ಚೈನ್" ಹೆಸರಿನಲ್ಲಿ ಉಡುಪಿಯ ಸ್ವರೂಪ್ ಮಿನರಲ್ ಪ್ರೈವೇಟ್ ಲಿಮಿಟೆಡ್ ಆಮದು ಮಾಡಿಕೊಂಡಿತ್ತು. ಹೆವಿ ಮೆಟಲ್ ಸ್ಪ್ರಾಕೆಟ್ಗಳ ಒಳಗೆ ಚಿನ್ನವನ್ನು ಚಾಣಾಕ್ಷವಾಗಿ ಮರೆಮಾಡಲಾಗಿತ್ತು. ಮೆಟಲ್ ಗಳನ್ನು ಸ್ಕ್ಯಾನಿಂಗ್ ಮಾಡಿದಾಗ ಅನುಮಾನಗೊಂಡ ಅಧಿಕಾರಿಗಳು ಬಜ್ಪೆಯಲ್ಲಿ ಮೆಕ್ಯಾನಿಕ್ ಮತ್ತು ಲ್ಯಾಥ್ ಯಂತ್ರದ ಸಹಾಯದಿಂದ ಚಿನ್ನವನ್ನು ಪತ್ತೆಹಚ್ಚಿದ್ದಾರೆ.
5 ವೃತ್ತಾಕಾರದ ಮೆಟಲ್ ಪ್ಲೇಟ್‌ಗಳ ಒಳಗೆ 24 ಕ್ಯಾರೆಟ್ ಶುದ್ಧತೆಯ 4995 ಗ್ರಾಂ ಚಿನ್ನದ ತುಂಡುಗಳು ದೊರಕಿದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಸುಮಾರು 2 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮೂಲಕ ಅಧಿಕಾರಿಗಳು ಮಂಗಳೂರಿನಲ್ಲಿ ದಶಕದ ಅತಿದೊಡ್ಡ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಸ್ಟಮ್ಸ್ ಆಕ್ಟ್, 1962 ರ ನಿಬಂಧನೆಗಳ ಅಡಿಯಲ್ಲಿ ಡಿಆರ್ ಐ ಅಧಿಕಾರಿಗಳು ಈ ಚಿನ್ನವನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.