ಮಂಗಳೂರು: ನಗರದ ಬೋಂದೆಲ್ ಸಮೀಪದ ಈಶ್ವರಕಟ್ಟೆ ಎಂಬಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಕಾವೂರು ಪೊಲೀಸರು, 41 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ನೆಲ್ಲಿಕಟ್ಟೆ ನಿವಾಸಿ ಮುಹಮ್ಮದ್ ಇಕ್ಬಾಲ್ (34) ಹಾಗೂ ಎರಿಯಾಲ್ ನಿವಾಸಿ ಫಜಲ್ ಎ.ಎಂ. (30) ಬಂಧಿತ ಆರೋಪಿಗಳು. ಪದವಿನಂಗಡಿ ಕಡೆಯಿಂದ ಬೋಂದೆಲ್ ಮಾರ್ಗವಾಗಿ ಮಣಿಪಾಲದ ಕಡೆಗೆ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 12 ಲಕ್ಷ ರೂ. ಮೌಲ್ಯದ 41 ಕೆ.ಜಿ. ಗಾಂಜಾ, ಸಾಗಾಟಕ್ಕೆ ಬಳಸಿದ 50 ಸಾವಿರ ರೂ. ಮೌಲ್ಯದ ಕಾರು, ತೂಕ ಮಾಡಲು ಬಳಸುವ 250 ರೂ. ಮೌಲ್ಯದ ತೂಕಮಾಪಕ, ಐದು ಸಾವಿರ ಮೌಲ್ಯದ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ 12,55,260 ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಪತ್ತೆಯಾದ ಗರಿಷ್ಠ ಪ್ರಮಾಣದ ಗಾಂಜಾ ಇದಾಗಿದ್ದು, ಕೇರಳದಿಂದ ಗಾಂಜಾ ಖರೀದಿಸಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಕೇಂದ್ರೀಕರಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.