ಪುತ್ತೂರು:ಕಾನೂನುಗಳಿಂದ ಮಾತ್ರ ಅಪಘಾತ ತಡೆಯಲು ಆಗದು, ಪ್ರತಿಯೊಬ್ಬ ವಾಹನ ಸವಾರ ತನ್ನ ಜೀವ ಮತ್ತು ಇನ್ನೊಬ್ಬರ ಜೀವದ ಮಹತ್ವದ ಬಗ್ಗೆ ಸ್ವಯಂ ಜಾಗೃತಿ ಹೊಂದಿದಾಗ ಮಾತ್ರ ಅಪಘಾತ ಪ್ರಮಾಣ ನಿಯಂತ್ರಿಸಲು ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಇವರ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ 32ನೇ ರಾಷ್ಟ್ರೀಯ 'ರಸ್ತೆ ಸುರಕ್ಷತಾ ಮಾಸ' ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್‌ಗಿಂತಲೂ ಅಪಘಾತದಿಂದ ಉಂಟಾದ ಸಾವಿನ ಸಂಖ್ಯೆ ಹೆಚ್ಚು ಅನ್ನುವುದನ್ನು ಕಳೆದ ಮೂರು ತಿಂಗಳ ಅಂಕಿ ಅಂಶ ತೆರೆದಿಟ್ಟಿದೆ. ಹೀಗಾಗಿ ರಸ್ತೆ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಮಾಸ ವೇದಿಕೆಯಾಗಬೇಕು ಎಂದು ಹೇಳಿದ್ರು.
ರಸ್ತೆ ಸುರಕ್ಷತೆಗೆ ಎಲ್ಲರೂ ಕೈ ಜೋಡಿಸಬೇಕು. ಆ ಮೂಲಕ ಸಮಾಜವನ್ನು ಸುರಕ್ಷಿತವಾಗಿಡಬೇಕು. ಇದಕ್ಕಾಗಿ ಜನಜಾಗೃತಿ ಅವಶ್ಯಕತೆಯ ಜತೆಗೆ ಪಠ್ಯಗಳಲ್ಲಿಯು ಬೋಧನಾ ರೂಪದಲ್ಲಿ ದಾಖಲಾಗಬೇಕು ಎಂದರು. ಸಭೆಯ ಬಳಿಕ ಕಾವೂರು ಯಕ್ಷಪೂರ್ವ ಕಲಾಕೇಂದ್ರದ ಸದಸ್ಯರಿಂದ ಸುರಕ್ಷಾ ವಿಜಯ ತುಳು ಯಕ್ಷಗಾನ ಪ್ರದರ್ಶನಗೊಂಡಿತು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಡಿವೈಎಸ್‌ಪಿ ಗಾನಾ ಪಿ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಕೃಷ್ಣ ಮೋಹನ್, ರೋಟರಿ ಕ್ಲಬ್ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.