ಮಂಗಳೂರು : ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಬೆಳ್ಳಾರೆಯ ಮಸೂದ್ ಹಾಗೂ ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ನೆರವಿಗೆ ಬಂದಿದೆ. ಮೃತರಾದ ತಮ್ಮ ಸಮುದಾಯದ ಯುವಕರ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡುವ ಮೂಲಕ ನೊಂದವರ ಪರ ಕಾನೂನು ಸಮರಕ್ಕೂ ಸಜ್ಜಾಗಿದೆ.
ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೇವಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ, 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಆದರೆ ಹತ್ಯೆಯಾದ ಇಬ್ಬರು ಮುಸ್ಲಿಂ ಯುವಕರಿಗೆ ಯಾವುದೇ ಪರಿಹಾರ ನೀಡಿರಲಿಲ್ಲ. ಇದರಿಂದ ಸಭೆ ಕರೆದ ಮುಸ್ಲಿಂ ಸೆಂಟ್ರಲ್ ಕಮಿಟಿ ಆ ಎರಡು ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಅವರ ನಿವಾಸದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪರಿಹಾರವನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮಸೂದ್ ಮತ್ತು ಫಾಝಿಲ್‌ನ ಕುಟುಂಬಸ್ಥರಿಗೆ ತಲಾ 30 ಲಕ್ಷ ರೂ. ನೀಡಲು ಮತ್ತು ಪ್ರಕರಣದ ಸಂಬಂಧ ಕುಟುಂಬಸ್ಥರಿಗೆ ಕಾನೂನಿನ ನೆರವು ನೀಡಲು ನಿರ್ಣಯಿಸಲಾಗಿದೆ.