ಬೆಂಗಳೂರು: ಪಟಾಕಿ ಅವಘಡಗಳಿಂದ ಕಣ್ಣುಗಳಿಗೆ ಹಾನಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಬಾರಿ ಬೆಂಗಳೂರು ನಗರದಲ್ಲಿಯೇ 91 ಪ್ರಕರಣಗಳು ದಾಖಲಾಗಿದ್ದು ಆತಂಕವನ್ನು ಹೆಚ್ಚಿಸಿದೆ.
ದೀಪಾವಳಿ ಹಬ್ಬವೆಂದರೆ ಬೆಳಕಿನ ಸಂಭ್ರಮ. ಈ ದೀಪಾವಳಿಗೆ ಮತ್ತಷ್ಟು ಮೆರುಗು ಬರುವುದು ರಾತ್ರಿ ಸಿಡಿಸುವ ಪಟಾಕಿಗಳಿಂದ. ಬಣ್ಣ ಬಣ್ಣದ ಬೆಂಕಿಯ ಚಿತ್ತಾರಗಳನ್ನು ನೋಡಿ ಖುಷಿ ಪಡುವುದು ಕೂಡ ದೀಪಾವಳಿ ಹಬ್ಬದ ಭಾಗವಾಗಿದೆ. ಆದರೆ ಅದೇ ಆತಂಕವನ್ನು ಕೂಡ ಉಂಟುಮಾಡಿದೆ. ಪಟಾಕಿ ಸಿಡಿತದಿಂದ ಅವಘಡಗಳು ಮೂರು ದಿನಗಳಲ್ಲಿ ಹೆಚ್ಚಾಗಿವೆ. ಗಾಯಾಳುಗಳು ನಗರದ ನಾರಾಯಣ ನೇತ್ರಾಲಯ, ಮಿಂಟೋ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಹಚ್ಚುವವರಿಗಿಂತ ಅಕ್ಕಪಕ್ಕ ಇದ್ದವರಿಗೆ ಹೆಚ್ಚು ಗಾಯಗಳಾಗಿರುವುದು ಕಂಡು ಬಂದಿದೆ. ಮಿಂಟೋ ಆಸ್ಪತ್ರೆಯಲ್ಲಿ ಶನಿವಾರ 9 ಪ್ರಕರಣಗಳು ದಾಖಲಾಗಿದ್ದು, ಒಟ್ಟು 38 ಜನರು ಚಿಕಿತ್ಸೆ ಪಡೆದಿದ್ದಾರೆ. ಇನ್ನು ನಾರಾಯಣ ನೇತ್ರಾಲಯದಲ್ಲಿ ಕೂಡ ಒಟ್ಟು 53 ಪ್ರಕರಣಗಳು ದಾಖಲಾಗಿವೆ.
"ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ಆದರೆ ಪಟಾಕಿ ಹಚ್ಚುವವರು ಎಚ್ಚರಿಕೆ ವಹಿಸಿ" ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ರೋಹಿತ್ ಶೆಟ್ಟಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದೀಪಾವಳಿ ಪಟಾಕಿ ಅವಘಡ: ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ