ಉಳ್ಳಾಲ: ಟೆಂಪೋ ಅಡ್ಡಗಟ್ಟಿ ಮೀನು ವ್ಯಾಪಾರಿಯೊಬ್ಬರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ 2 ಲಕ್ಷ ರೂ. ನಗದು ದೋಚಿಕೊಂಡು ಮೂವರು ಮುಸುಕುಧಾರಿಗಳು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಸಮೀಪ ಇಂದು ನಸುಕಿನ ಜಾವ ನಡೆದಿದೆ.
ಉಳ್ಳಾಲದ ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಮುಸ್ತಾಫ ಹಲ್ಲೆಗೊಳಗಾದವರು. ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಸಮೀಪ ಮೀನು ಮಾರಾಟ ಮಾಡುತ್ತಿದ್ದ ವೇಳೆ ತೊಕ್ಕೊಟ್ಟು ಕಡೆಯಿಂದ ಕೆಂಪು ಬಣ್ಣದ ಕಾರಿನಲ್ಲಿ ಬಂದ ತಂಡವೊಂದು, ಮುಸ್ತಾಫ ಅವರ ಟೆಂಪೋ ಹಿಂಬಾಲಿಸಿ ನೇತ್ರಾವತಿ ಸೇತುವೆ ಸಮೀಪ ಅಡ್ಡಗಟ್ಟಿದೆ.
ಬಳಿಕ ಮುಸ್ತಾಫ ಅವರು ಟೆಂಪೋದಿಂದ ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿದ್ದ ಮೂವರಲ್ಲಿ, ಇಬ್ಬರು ಮುಸುಕುಧಾರಿಗಳು ತಲವಾರಿನಿಂದ ವ್ಯಾಪಾರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಟೆಂಪೋದಲ್ಲಿಟ್ಟ 2 ಲಕ್ಷ ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಸ್ಕೂಟರ್ನಲ್ಲಿ ರಸ್ತೆ ಮೇಲೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಗಾಯಾಳು ಮುಸ್ತಾಫ ಅವರನ್ನು ನೋಡಿ, ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸಿಪಿ ದಿನಕರ್ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ತನಿಖೆ ಆರಂಭಿಸಿದೆ.
ಇದನ್ನೂ ಓದಿ: ನಾನು ಕೀವ್ನಲ್ಲಿಯೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ