ಕಡಬ: ಮಾಸ್ಕ್ ಧರಿಸಿಲ್ಲ ಎಂದು ಕೂಲಿ ಕಾರ್ಮಿಕನೊಬ್ಬನಿಗೆ ದಂಡ ವಿಧಿಸಿದ ಕಡಬ ಪಟ್ಟಣ ಪಂಚಾಯತ್ನ ಕೊರೊನಾ ವಾರಿಯರ್ ಅಧಿಕಾರಿಯೋರ್ವರು ಪೇಚಿಗೆ ಸಿಲುಕಿದ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಕಡಬ ಪಟ್ಟಣ ಪಂಚಾಯತ್ನ ಕೊರೊನಾ ವಾರಿಯರ್ ತಂಡದ ಅಧಿಕಾರಿಯೊಬ್ಬರು 100 ರೂ. ದಂಡ ವಿಧಿಸಿ ಜಿಲ್ಲಾಡಳಿತದ ರಶೀದಿ ನೀಡಿದ್ದಾರೆ. ಈ ವೇಳೆ ಹಣವಿಲ್ಲ ಎಂದು ಬೇಡಿಕೊಂಡ ಕೂಲಿ ಕಾರ್ಮಿಕ ಕೊನೆಗೆ ತನ್ನ ಕೈಯಲ್ಲಿದ್ದ 10 ರೂ.ಗಳನ್ನು ಅಧಿಕಾರಿಯ ಕೈಗಿತ್ತಿದ್ದಾರೆ. ಆದರೆ, 100 ರೂ. ರಶೀದಿಯನ್ನು ನೀಡಿದ ಅಧಿಕಾರಿ ಬೇರೆ ದಾರಿ ಕಾಣದೆ ತನ್ನ ಕೈಯಿಂದ ಉಳಿದ 90 ರೂ. ಸೇರಿಸಿ ಸರ್ಕಾರಕ್ಕೆ ಪಾವತಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಹುತೇಕರು ಕೆಲಸವನ್ನು ಕಳೆದುಕೊಂಡು ಕೈಯಲ್ಲಿ ದುಡ್ಡಿಲ್ಲದೆಯೇ ಪರದಾಡುತ್ತಿರುವ ವೇಳೆ ಮಾಸ್ಕ್ ಸ್ವಲ್ಪ ಜಾರಿದ್ದರೂ ಸರಿಯಾಗಿ ಮಾಸ್ಕ್ ಧರಿಸಿಲ್ಲ ಎಂದು ಅಧಿಕಾರಿಗಳು ದಂಡ ವಿಧಿಸುತ್ತಿರುವುದು ಒಂದು ಕಡೆಯಾದರೆ, ಅಧಿಕಾರಿಗಳ ಒತ್ತಡದಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಸಾರ್ವಜನಿಕರಿಂದ ಹಿಡಿಶಾಪಕ್ಕೆ ಒಳಗಾಗುತ್ತಿರುವುದೂ ಕಂಡು ಬರುತ್ತಿದೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಪಂಚಾಯತ್ ಅಧಿಕಾರಿ ಹರೀಶ್ ಅವರು ಮಾಸ್ಕ್ ಧರಿಸದ ಕಾರಣ ನಾವು ಅನಿವಾರ್ಯವಾಗಿ ದಂಡ ವಿಧಿಸಲೇ ಬೇಕಾಗುತ್ತದೆ. ಆದರೆ ಸಾರ್ವಜನಿಕರ ಬಳಿ ಹಣ ಇರುವುದಿಲ್ಲ ಎಂಬ ವಿಚಾರವು ನಮ್ಮ ಗಮನಕ್ಕೆ ಬರುವುದಿಲ್ಲ. ಹಣ ನೀಡಿದ ನಂತರ ರಶೀದಿ ನೀಡೋಣ ಎಂದರೆ ಯಾರೂ ತಮ್ಮ ಬಳಿ ಹಣ ಇರುವ ಬಗ್ಗೆ ಹೇಳೋದೂ ಇಲ್ಲ. ದಂಡ ಬರೆದು ರಶೀದಿ ನೀಡಿದರೆ ಇಂತಹ ಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದ್ದಾರೆ.