ಚಿತ್ರದುರ್ಗ: ನೀರಿನ ಮೂಲವಿಲ್ಲದ ಜಿಲ್ಲೆಯಲ್ಲಿ ವಾಣಿ ವಿಲಾಸ ಅಣೆಕಟ್ಟಿನ ನೀರನ್ನು ನಂಬಿಯೇ ರೈತರು ಬಿತ್ತನೆ ಕಾರ್ಯ ಆರಂಭಿಸುತ್ತಿದ್ದರು. ಈ ಹಿನ್ನೆಲೆ ಚಳ್ಳಕೆರೆ ತಾಲೂಕಿನಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ವೇದಾವತಿ ನದಿಗೆ ವಿವಿ ಸಾಗರದಿಂದ ನೀರು ಹರಿಸಲಾಗಿದ್ದು, ರೈತರು ಸಂತಸಗೊಂಡಿದ್ದಾರೆ.
ಇಲ್ಲಿನ ಕಾಲುವೆ ಮೂಲಕ ಟಿ.ಎನ್.ಕೋಟೆ, ಗೋಸಿಕೆರೆ, ಪರಶುರಾಂಪುರ ದೊಡ್ಡಕೆರೆ, ಮತ್ತು ಸಣ್ಣ ಕೆರೆಗೆ ನೀರು ಹರಿಸಲಾಗಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈ ಭಾಗದ ರೈತರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಈಗಾಗಲೇ ವಿವಿ ಸಾಗರದಿಂದ 0.25 ಟಿಎಂಸಿ ನೀರನ್ನು ವೇದಾವತಿ ನದಿಗೆ ಹರಿಸಲಾಗಿದ್ದು, ಇದೀಗ ಆ ನೀರು ಹಲವು ಬ್ಯಾರೇಜ್ಗಳಿಗೆ ಜೀವಕಳೆ ತಂದಿದೆ.
ಈಗಾಗಲೇ ವೇದಾವತಿ ನದಿಯ ಶಿಡ್ಲಯ್ಯನಕೋಟೆ ಬ್ಯಾರೇಜ್, ನಿಂದದೊಡ್ಡಕೆರೆ ಮತ್ತು ಸಣ್ಣ ಕೆರೆಗಳಿಗೂ ನೀರು ಹರಿಯುತ್ತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಜೊತೆಗೂಡಿ ಶಾಸಕ ರಘುಮೂರ್ತಿ ಕಾಲುವೆ ಮುಖಾಂತರ ತೆರಳಿ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಹಲವು ರೈತ ಮುಖಂಡರು ಉಪಸ್ಥಿತರಿದ್ದು, ಶಾಸಕ ರಘುಮೂರ್ತಿಯವರಿಗೆ ಅಭಿನಂದಿಸಿದ್ದಾರೆ.