ಚಿತ್ರದುರ್ಗ : ಉಕ್ರೇನ್ ನಲ್ಲಿ ಸಿಲುಕಿದ್ದ ಕೋಟೆನಾಡಿನ ಇಬ್ಬರು ವಿದ್ಯಾರ್ಥಿಗಳು ತವರಿಗೆ ವಾಪಸಾಗಿದ್ದು, ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಇಲ್ಲಿನ ಚಳ್ಳಕೆರೆ ಪಟ್ಟಣದ ವಿದ್ಯಾರ್ಥಿನಿ ಸೀಮಾ ಸಿದ್ದಿಕಾ ಮತ್ತು ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ವಿದ್ಯಾರ್ಥಿ ನಿತೀಶ್ ಉಕ್ರೇನಿಂದ ಮರಳಿರುವ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ. ಇವರ ಮನೆಗೆ ಜಿಲ್ಲಾಡಳಿತದ ಪರವಾಗಿ ತಹಶೀಲ್ದಾರ್ ಎನ್. ರಘುಮೂರ್ತಿ ಭೇಟಿ ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದ್ದಾರೆ.
ಇನ್ನೂ ತವರಿಗೆ ಮರಳಿರುವ ಸೀಮಾ ಸಿದ್ದಿಕಾ, ಇದೊಂದು ಕೆಟ್ಟ ಅನುಭವ ಆಗಿತ್ತು ಯುದ್ದ ಪ್ರಾರಂಭವಾದಾಗ ನಮಗೆ ವಾಟ್ಸ್ಆ್ಯಪ್ ಮೂಲಕ ಯುದ್ದದ ವಿಚಾರ ತಿಳಿಯಿತು. ನಾವು ಗಾಸಿಪ್ ಎಂದು ತಿಳಿದುಕೊಂಡಿದ್ದೆವು. ಆದರೆ ಮತ್ತೆ ನಮಗೆ ನಿಜಾಂಶ ತಿಳಿದಾಗ ಭಯ ಪ್ರಾರಂಭವಾಯಿತು. ನಂತರ ಕಾಲೇಜು ಬಂಕರ್ ಗಳಲ್ಲಿದ್ದವರನ್ನು ರೈಲು ಮೂಲಕ ಉಕ್ರೇನ್ ಗಡಿ ಪ್ರದೇಶಕ್ಕೆ ಕಳುಹಿಸಲಾಯಿತು. ಬಳಿಕ ಹಂಗೇರಿ ದೇಶದ ಮೂಲಕ ಭಾರತಕ್ಕೆ ಬಂದೆವು.
ಭಾರತದ ವಿದೇಶಾಂಗ ಸಚಿವಾಲಯದಿಂದ ಭಾರತಕ್ಕೆ ಬರಲು ವಿಮಾನದ ವ್ಯವಸ್ಥೆ ಮಾಡಿದ್ದರು, ದೆಹಲಿಗೆ ತಲುಪಿದ ಬಳಿಕ ಕರ್ನಾಟಕ ಭವನದಲ್ಲಿ ಉಳಿಯಲು ಸರ್ಕಾರ ವ್ಯವಸ್ಥೆ ಮಾಡಿತ್ತು. ಕೊನೆಗೂ ತವರಿಗೆ ಮರಳಿ ನಿರಾಳರಾಗಿದ್ದೇವೆ ಎಂದು ಸೀಮಾ ಹೇಳಿದ್ದಾರೆ.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಾಲೂಕಿನಿಂದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದು ಯುದ್ಧದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದರು. ಅಂತೂ ಸುರಕ್ಷಿತವಾಗಿ ಮನೆಗಳಿಗೆ ತಲುಪಿದ್ದಾರೆ. ಜಾಜೂರಿನ ವಿದ್ಯಾರ್ಥಿ ನಿತೀಶ ಕುಮಾರ್ ಮನೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಲಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ್, ಮುಸ್ಲಿಂ ಸಮುದಾಯದ ಮುಖಂಡರಾದ ಅತೂಕರ್ ರಹೆಮನ್, ಕೆ.ಜಿ.ಬಿ.ಮುಜೀಬ್ ಮತ್ತಿತರರು ಉಪಸ್ಥಿತರಿದ್ದರು.
ಓದಿ :ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ