ಚಿತ್ರದುರ್ಗ: ಕುರಿಗಳನ್ನು ಕಳ್ಳತನ ಮಾಡಿ ಕುರಿಗಾಯಿಯನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಕೊಲೆ ಆರೋಪಿಗಳನ್ನು ಒಂದೇ ದಿನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಜೈಲಿಗೆ ಕಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಪ್ರಕರಣ..
ಭರಮಸಾಗರ ಠಾಣಾ ವ್ಯಾಪ್ತಿಯ ಸಿರಿಗೆರೆ ಗ್ರಾಮದ ರುದ್ರಮ್ಮ ಜಯಣ್ಣ ಎಂಬುವರ ಮನೆಯಲ್ಲಿ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ರಾಮಜ್ಜ (60)ನ ಕೊಲೆಯಾಗಿತ್ತು. ಕಳೆದ ಒಂದು ವಾರದ ಹಿಂದೆ ಅಂದ್ರೆ ಇದೇ ತಿಂಗಳು 10ರಂದು ರಾಮಜ್ಜ ಕುರಿ ಮೇಯಿಸಲು ಹೋಗಿದ್ದರು. ಸಂಜೆ 8 ಗಂಟೆಯಾದರೂ ಕುರಿಗಳ ಜೊತೆಗೆ ಮನೆಗೆ ಬರಲಿಲ್ಲ. ಬದಲಿಗೆ ಕುರಿಗಳು ಮಾತ್ರ ಮನೆಗೆ ಬಂದಿದ್ದವು. ಈ ಪೈಕಿ 5 ಕುರಿಗಳು ಕಳ್ಳತನವಾಗಿದ್ದವು.
ಅದೇ ಗ್ರಾಮದ ರಾಮಚಂದ್ರಪ್ಪ ಹಾಗೂ ನಾಗರಾಜ್ ಎಂಬುವರು ತಮ್ಮ ತೋಟದ ಕಡೆಗೆ ಹೋಗುತ್ತಿರುವಾಗ ಕೆಟ್ಟ ದುರ್ವಾಸನೆ ಬಂದಿದ್ದು, ಹೋಗಿ ನೋಡಿದಾಗ ಶವ ಪತ್ತೆಯಾಗಿದೆ. ಗ್ರಾಮದ ಗಂಗಾಧರಪ್ಪ ಅವರ ತೋಟದಲ್ಲಿ ಅಡಿಕೆ ಗರಿಯಲ್ಲಿ ಶವವನ್ನು ಮುಚ್ಚಿಡಲಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಕುರಿಗಳ ಮಾಲೀಕರಾದ ರುದ್ರಮ್ಮ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿ ಕೊಲೆ ಮಾಡಿದ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆ ಭರಮಸಾಗರ ಠಾಣೆಯ ಪೊಲೀಸರು ತನಿಖೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳಾದ ರವಿ, ರಘು ಮತ್ತು ರವಿಕಿರಣ ಎಂಬುವರು ಹಾಗೂ 65 ಸಾವಿರ ಮೌಲ್ಯದ ಐದು ಕುರಿಗಳನ್ನು ಒಂದೇ ದಿನದಲ್ಲಿ ಪತ್ತೆ ಮಾಡಿದರು.
ದೂರು ನೀಡಿದ ಆಧಾರದ ಮೇಲೆ ಎಸ್ಪಿ ರಾಧಿಕಾ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಗ್ರಾಮಾಂತರ ಹಾಗೂ ಭರಮಸಾಗರ ಪೊಲೀಸ್ ಠಾಣೆಯ ಸಿಬ್ಬಂದಿಯು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕೇವಲ ಐದು ಕುರಿಗಳಿಗಾಗಿ ಕೊಲೆ ಮಾಡಿದ ಆರೋಪಿಗಳು ಈಗ ಜೀವನ ಪರ್ಯಂತ ಜೈಲು ಪಾಲಾಗಿದ್ದಾರೆ.