ಚಿತ್ರದುರ್ಗ: ಚಿಕಿತ್ಸೆಯ ವೆಚ್ಚ ಭರಿಸಲು ಹಣ ಇಲ್ಲ ಎಂದು ಬಾಲಕಿಯೋರ್ವಳನ್ನು ಚಳ್ಳಕೆರೆಯ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹೊರ ಹಾಕಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಈ ಬಗ್ಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹುಡೇವು ಗ್ರಾಮದ ಬಾಲಕಿ ಅರ್ಚನಾ ಟೈಫಾಯಿಡ್ ಜ್ವರಕ್ಕೆ ತುತ್ತಾಗಿ ಚಿಕಿತ್ಸೆಗೆಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಅಜ್ಜಿ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಈ ಬಾಲಕಿಗೆ ಟೈಫಾಯಿಡ್ ನಿಯಂತ್ರಣ ಮಾಡುವ ಸಲುವಾಗಿ ವೈದ್ಯರು ಗ್ಲೂಕೋಸ್ ಹಾಕಿದ್ದರು. ಬಳಿಕ ಆಸ್ಪತ್ರೆ ಸಿಬ್ಬಂದಿ ಒಂದೇ ದಿನಕ್ಕೆ 3 ಸಾವಿರ ರೂ ಬಿಲ್ ಮಾಡಿದ್ದಾರಂತೆ. ಬಿಲ್ ಕಟ್ಟಲು ಅಜ್ಜಿ ಬಳಿ ಅಷ್ಟು ಹಣವಿಲ್ಲ ಎಂದು ತಿಳಿದಾಗ ಗ್ಲೂಕೋಸ್ ಡ್ರಿಪ್ ಸಮೇತ ಬಾಲಕಿಯನ್ನು ಸಿಬ್ಬಂದಿ ಹೊರ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಕಟ್ಟಲು ಹಣ ಇಲ್ಲದೆ ಕೈಯಲ್ಲಿ ಡ್ರಿಪ್ ಬಾಟಲ್ ಹಿಡಿದು ಬಾಲಕಿ ವಾಪಸ್ ಊರಿಗೆ ಹೊರಟ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿಹಾಕಿದೆ.