ಚಿತ್ರದುರ್ಗ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಸಚಿವ ಸಿಟಿ ರವಿ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಖಾರವಾಗಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಂಕ್ಚರ್ ಹಾಕುವವರೆಲ್ಲ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪಂಕ್ಚರ್ ಹಾಕುವವರ ತಂಟೆಗೆ ಬರಬೇಡ. ನಮ್ಮ ಸಮುದಾಯದಲ್ಲಿ ಶೇ 90 ರಷ್ಟು ಜನರು ಪಂಕ್ಚರ್ ಹಾಕುವವರು, ಕಸ ಹೊಡಿಯುವವರು, ಆಟೋ ಚಾಲಕರಿದ್ದಾರೆ. ನಮ್ಮ ಸಮುದಾಯದವರು ಪಂಕ್ಚರ್ ಹಾಕುವ ಕಾಯಕ ನಿಲ್ಲಿಸಿದರೆ ನಿಮ್ಮ ಕಾರುಗಳು ಶೆಡ್ ಗಳಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಎಂದು ತಿರುಗೇಟು ಕೊಟ್ಟರು.
ಇದೇ ವೇಳೆ, ಸಚಿವ ರವಿ ವಿರುದ್ಧ ವಾಗ್ದಾಳಿ ನಡೆಸಿದ ಜಬ್ಬರ್, ಗೋದ್ರಾ ಗಲಭೆಯ ಬಳಿಕ ಏನಾಯ್ತು ಎಂದು ನೀನು ನಮಗೆ ಹೇಳಲು ಬರುತ್ತೀಯ. ನೋಡು ಇವತ್ತು ಚಿತ್ರದುರ್ಗದಲ್ಲಿ ಎಷ್ಟು ಜನ ಸೇರಿದ್ದಾರೆ. ಇಂತಹ ಡೈಲಾಗ್ಗಳನ್ನು ನಿನ್ನ ಕಚೇರಿಯಲ್ಲಿ ಇಟ್ಕೋ ಎಂದು ನೇರ ಎಚ್ಚರಿಕೆಯನ್ನೂ ನೀಡಿದರು.