ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಸಿಎಂ ಮೀಸಲಾತಿ ನೀಡಲು ಸದನಸಲ್ಲಿ ನಿರಾಕರಿಸಿದ ಬೆನ್ನಲ್ಲೇ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಬಳಿ ಹೆದ್ದಾರಿ 4 ಬಂದ್ ಮಾಡಿ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ಸದನಸಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸಿಎಂ ಅವರಲ್ಲಿ ಕೇಳಿಕೊಂಡರು. ಬಳಿಕ ಮೀಸಲಾತಿ ಪಡೆಯಬೇಕು ಎಂದರೆ ಕೇಂದ್ರ ವರಿಷ್ಠರನ್ನು ಭೇಟಿ ಮಾಡಿ ಎಂದು ಸಿಎಂ ಬಿಎಸ್‌ವೈ ಹೇಳಿಕೆ ನೀಡಿದ ಬೆನ್ನಲ್ಲೇ ಜಯಬಸವ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡ ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವರು ಸಿಎಂ ವಿರುದ್ಧ ಸಿಡಿಮಿಡಿಗೊಂಡಿದ್ದರು.
ಬಳಿಕ ಪಾದಯಾತ್ರೆ ನಡೆಸುವ ಮಧ್ಯೆ ಪಂಚಮಸಾಲಿ ಶ್ರೀಗಳ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಲಾಗುತ್ತಿದೆ. ಇನ್ನು ಹೆದ್ದಾರಿ ತಡೆ ನಡೆಸಿದ ಪಾದಯಾತ್ರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.