ಚಿತ್ರದುರ್ಗ: ಏಕೈಕ ಜಲಾಶಯಕ್ಕೆ ವರ್ಷವಿಡೀ 12 ಟಿಎಂಸಿ ನೀರು ಹರಿಸುತ್ತೇವೆ ಎಂದು ಸರ್ಕಾರ ರೈತರಿಗೆ ಭರವಸೆ ನೀಡಿತ್ತು. ಆದ್ರೀಗ, ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಜಲಾಶಯಕ್ಕೆ ಹರಿಯುತ್ತಿದ್ದ ನೀರು ನಿಲ್ಲಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟೆನಾಡಿನ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಬರೋಬ್ಬರಿ 20 ವರ್ಷಗಳ ಬಳಿಕ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನವಾಗಿತ್ತು. ವಾಣಿ ವಿಲಾಸ ಜಲಾಶಯಕ್ಕೆ ಬರುವ ಮಾರ್ಚ್ ತಿಂಗಳವರೆಗೆ 12 ಟಿಎಂಸಿ ನೀರು ಹರಿದರೆ ಜಿಲ್ಲೆಯ ಜನತೆಗೆ ಕುಡಿಯುವ ಹಾಗೂ ಕೆರೆ ತುಂಬಿಸಲು ಅನುಕೂಲವಾಗಲಿದೆ ಎಂದು ಜನರು ಸಂತಸ ವ್ಯಕ್ತಪಡಿಸುವಷ್ಟರಲ್ಲಿ, ಸರ್ಕಾರ ರೈತರ ಆಸೆಗೆ ತಣ್ಣೀರೆಚಿದೆ.
ಬರುವ ಮಾರ್ಚ್ ಕೊನೆಯ ವಾರದವರೆಗೂ ಹನ್ನೆರಡೂವರೆ ಟಿಎಂಸಿ ನೀರು ಹರಿಸುವ ಆದೇಶ ಸರ್ಕಾರ ನೀಡಿತ್ತು. ಈ ಪೈಕಿ ಸದ್ಯಕ್ಕೆ 6 ಟಿಎಂಸಿ ನೀರನ್ನು ಬಿಟ್ಟಿರುವ ಅಧಿಕಾರಿಗಳು, ರಾತ್ರೋರಾತ್ರಿ ವಿವಿ ಸಾಗರಕ್ಕೆ ಹರಿಯುತ್ತಿದ್ದ ನೀರು ಬಂದ್ ಮಾಡಿದ್ದಾರೆ. ಸರ್ಕಾರ ಆದೇಶ ನೀಡಿದಂತೆ ಮಾರ್ಚ್ 31ರವರೆಗೆ ನೀರು ಹರಿಸಿದ್ರೆ, 25 ವರ್ಷಗಳ ಬಳಿಕ ಪ್ರಥಮ ಬಾರಿಗೆ ಜಲಾಶಯ 110 ಅಡಿ ತಲುಪುತ್ತಿತ್ತು. ಆದರೆ ಯಾವುದೇ ಕಾರಣ ನೀಡದೆ ನೀರನ್ನು ಬಂದ್ ಮಾಡಲಾಗಿದೆ. ಸದ್ಯದ ನೀರಿನ ಪ್ರಮಾಣ ಬೇಸಿಗೆ ಆರಂಭವಾಗಿ ಮಳೆಗಾಲ ಪ್ರಾರಂಭದಲ್ಲಿ ಬೆಳೆ ಸೇರಿದಂತೆ ನೀರಿಗೆ ಅಭಾವ ಉಂಟಾಗುವ ಸಾಧ್ಯತೆಯಿದೆ.
ಈ ಕುರಿತು ಶಾಸಕ ತಿಪ್ಪಾರೆಡ್ಡಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ರೈತರ ಒತ್ತಾಯದಿಂದ ಜಿಲ್ಲೆಗೆ ಬರುತ್ತಿದ್ದ ನೀರನ್ನ ದಾವಣಗೆರೆ ಜಿಲ್ಲೆಗೆ ಹರಿಸಲಾಗುತ್ತಿದೆ. ಏಕಾಏಕಿ ನೀರು ಬಂದ್ ಮಾಡಿದ ಪರಿಣಾಮ ರೈತರಿಗೆ ಅನ್ಯಾಯವಾಗುತ್ತಿದೆ. ನಾನು ಕೂಡ ಸಿಎಂ ಜೊತೆಗೆ ಚರ್ಚೆ ಮಾಡಿ ರೈತರಿಗೆ ನ್ಯಾಯ ಒದಗಿಸುವ ಕ್ರಮಕ್ಕೆ ಮುಂದಾಗುತ್ತೇನೆ ಎಂದಿದ್ದಾರೆ.