ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆಗಳಲ್ಲಿರುವ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಬೀಜ ಕಾಯ್ದೆ, ಕೀಟನಾಶಕ ಕಾಯ್ದೆ ಹಾಗೂ ರಸಗೊಬ್ಬರ ನಿಯಂತ್ರಣ ಆದೇಶಗಳು ಮತ್ತು ಅವುಗಳಡಿ ಬರುವ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಕೆಲವು ಅಂಗಡಿಗಳ ಮಾರಾಟ ಚಟುವಟಿಕೆಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಪರವಾನಗಿ ಪಡೆದಿರುವ ಎಲ್ಲಾ ಖಾಸಗಿ ಕೃಷಿ ಪರಿಕರಗಳ ಮಾರಾಟಗಾರರು ಮತ್ತು ಸಹಕಾರ ಸಂಘಗಳು ಕಾನೂನು ಪ್ರಕಾರ ವಹಿವಾಟು ನಡೆಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಕೃಷಿ ಇಲಾಖೆಯಿಂದ ಪಡೆದಿರುವ ಬೀಜ, ರಸಗೊಬ್ಬರ, ಕೀಟನಾಶಕ ಪರವಾನಗಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಇದರಿಂದ ರೈತರಿಗೆ ಅಧಿಕೃತ ಕೃಷಿ ಪರಿಕರಗಳ ಮಾರಾಟಗಾರರು ಎಂಬ ಮಾಹಿತಿ ದೊರೆಯುತ್ತದೆ ಎಂದು ತಿಳುವಳಿಕೆ ನೀಡಿದರು.