ಚಿತ್ರದುರ್ಗ : ಕೊರೊನಾ ನಡುವೆಯೂ ನಾಡಿನಾದ್ಯಂತ ಬಸವ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಗಿದೆ. ಬಸವ ಜಯಂತಿ ಪ್ರಯುಕ್ತ ಹಿರಿಯೂರಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರಿಂದ ಸಂಗೀತ ಸಂಜೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
10 ಕ್ಕೂ ಹೆಚ್ಚು ಸೋಂಕಿತರು ಇರುವ ವಾರ್ಡ್ ನಲ್ಲಿ ರವಿಶಂಕರ್ ಎಂಬ ಸೋಂಕಿತ ವ್ಯಕ್ತಿ ಪುನೀತ್ ರಾಜಕುಮಾರ್ ಅಭಿನಯದ "ರಾಜಕುಮಾರ" ಚಿತ್ರದ "ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ" ಎಂಬ ಹಾಡಿಗೆ ಕೀ ಬೋರ್ಡ್ ನುಡಿಸಿ ಇತರೆ ಸೋಂಕಿತರನ್ನು ರಂಜಿಸಿದ್ದಾರೆ. ಸೋಂಕಿತ ರವಿಶಂಕರ್ ಕೀ ಬೋರ್ಡ್ ನುಡಿಸಿದರೆ ಇತರೇ ಸೋಂಕಿತರು ಹಾಡಿನ ಸಂಗೀತಕ್ಕೆ ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದಾರೆ. ಸೋಂಕು ತಗುಲಿದೆ ಎಂಬ ಮಾನಸಿಕ ಒತ್ತಡಕ್ಕೆ ಸಿಲುಕಿ, ಯೋಚನೆ ಮಾಡುತ್ತಿರುವವರನ್ನು ರಂಜಿಸಿ, ಧೈರ್ಯ ತುಂಬಬೇಕು ಎನ್ನುವ ದೃಷ್ಟಿಯಿಂದ ರವಿಶಂಕರ್ ಮುಂದಾಗಿರುವುದು ವಿಶೇಷ.
ಇದೇ ವೇಳೆ ಮಾತನಾಡಿದ ರಾಘವೇಂದ್ರ ಹಿರಿಯೂರು, ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ. ಡಾಕ್ಟರ್ ಗಳು ಸಮಯಕ್ಕೆ ಸರಿಯಾಗಿ ಬಂದು ಚಿಕಿತ್ಸೆ ಕೊಡುವ ಮೂಲಕ ಚೆನ್ನಾಗಿ ಸ್ಪಂದಿಸುತ್ತಾರೆ. ಇಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಮಾತ್ರೆ, ಇಂಜೆಕ್ಷನ್ ಸಕಾಲಕ್ಕೆ ಸರಿಯಾಗಿ ನೀಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಆಕ್ಸಿಜನ್ ಸಮಸ್ಯೆ ಇಲ್ಲ. ನಾವೆಲ್ಲರೂ ಆರಾಮಾಗಿ ಇದಿವಿ, ಯಾರು ಹೆದರಬೇಡಿ, ಧೈರ್ಯವಾಗಿ ಕೊರೊನಾ ಎದುರಿಸಬೇಕು. ನನಗೂ ಪಾಸಿಟಿವ್ ಬಂದಿದೆ. ಎಲ್ಲರೂ ಧೈರ್ಯದಿಂದ ಗೆಲ್ಲಬೇಕು ಎಂದರು.
ಎಲ್ಲ ರೋಗಿಗಳ ಕೋರಿಕೆ ಮೇರೆಗೆ, ಮನರಂಜನೆ ನೀಡಿದ್ದಾರೆ. ವಚನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ವಿವಿಧ ಹಾಡುಗಳಿಗೆ ಕೀ ಬೋರ್ಡ್ ನುಡಿಸಿ ಸೋಂಕಿತರನ್ನು ರಂಜಿಸಿದ್ದಾರೆ. ಈ ಕಾರ್ಯಕ್ಕೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡಾಕ್ಟರ್ ಮತ್ತು ನರ್ಸ್ ಗಳ ಕಾರ್ಯ ಶ್ಲಾಘನೀಯ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಬಸವರಾಜ್, ನರ್ಸ್ ಗಳಾದ ಸಂಧ್ಯಾ, ಪ್ರತಾಪ್ ದ್ರೂಪಿ, ಭಾಗ್ಯ ಸಿದ್ದು, ಮಂಗಳ ದ್ರೂಪಿ, ಭಾಗವಹಿಸಿದ್ದರು.