ಚಿತ್ರದುರ್ಗ: ಜಿಲ್ಲೆಯ ಐವರು ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಸಚಿವ ಸಂಪುಟ ಪುನರ್ ವಿಂಗಡನೆ ಆಗುತ್ತದೆ ಎಂಬ ವಿಷಯ ತಿಳಿದ ಮೊಳಕಾಲ್ಮೂರು ಶಾಸಕ ಸಚಿವ ಶ್ರೀರಾಮುಲು ಡಿಸಿಎಂ ಸ್ಥಾನಕ್ಕೆ ಫೈಟ್ ಮಾಡುತ್ತಿದ್ದಾರೆ.
ಜಿಲ್ಲೆಯ ಹಿರಿಯ ಶಾಸಕ ಜಿ. ಹೆಚ್ ತಿಪ್ಪಾರೆಡ್ಡಿ ಹಿರಿಯರ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಇತ್ತ ಯೂಥ್ ಐಕಾನ್ ಎಂದು ಗುರುತಿಸಿಕೊಳ್ಳುತ್ತಿರುವ ಹೊಸದುರ್ಗ ಶಾಸಕ ಕೂಡ ಸಚಿವರ ಪಟ್ಟಿಯಲ್ಲಿದ್ದಾರೆ.
ಬಿಎಸ್ವೈ ಆಪ್ತ ಅಂತಲೇ ಕರೆಯಿಸಿಕೊಳ್ಳುತ್ತಿರುವ ಹೊಳಲ್ಕೆರೆ ಶಾಸಕ ಪ್ರತಿ ಬಾರಿಯೂ ನನಗೆ ಸಚಿವ ಸ್ಥಾನ ಈಗ ಸಿಗುತ್ತದೆ, ಆಗ ಸಿಗುತ್ತದೆ ಎಂಬ ಭರವಸೆಯಲ್ಲಿದ್ದಾರೆ. ಮಹಿಳಾ ಕೋಟಾದಡಿ ಆಗಲಿ, ಇಲ್ಲ ಸಮುದಾಯದ ಕೋಟಾದಲ್ಲಿ ಆಗಲಿ ಈ ಬಾರಿ ಸಂಪುಟ ಸೇರಿಯೇ ಸೇರುತ್ತೇನೆ ಎಂಬ ಆಶಯದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕೂಡ ರೇಸ್ನಲ್ಲಿದ್ದಾರೆ.
ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರ ಹೆಸರು ಮೊಟ್ಟೆ ಹಗರದಲ್ಲಿ ಕೇಳಿ ಬಂದಿದೆ. ಅವರಿಗೆ ಒಂದು ವೇಳೆ ಕೊಕ್ ಕೊಟ್ಟರೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಅನುಮಾನವೇ ಇಲ್ಲ. ಜಿಲ್ಲೆಯ ಐವರು ಶಾಸಕರು ಬೆಂಗಳೂರಿನಲ್ಲಿದ್ದು, ಯಾರಿಗೆ ಸಿಗುತ್ತದೆ ಎನ್ನುವುದು ನಿಗೂಢವಾಗಿದೆ.
ಒಂದು ವೇಳೆ ಡಿಸಿಎಂ ಸ್ಥಾನ ಶ್ರೀರಾಮುಲು ಅವರಿಗೆ ಸಿಕ್ಕರೆ, ಇನ್ನುಳಿದ ನಾಲ್ವರಲ್ಲಿ ಸಚಿವ ಸ್ಥಾನ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.