ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಸಾಗರ ಡ್ಯಾಂನಿಂದ ಚಳ್ಳಕೆರೆಗೆ ನೀರು ಹರಿಸಿದ ವಿಚಾರವಾಗಿ ಇಬ್ಬರು ಶಾಸಕರ ನಡುವೆ ವಾಗ್ದಾಳಿ ಮುಂದುವರೆದಿದೆ. ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದು ಸರ್ಕಾರ ನೀರು ಹರಿಸಿದೆ ಎಂದು ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾಡಿದ್ದ ಆರೋಪಕ್ಕೆ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ತಿರುಗೇಟು ನೀಡಿದ್ದಾರೆ.
ವಾಣಿ ವಿಲಾಸ ಸಾಗರ ಜಲಾಶಯ ಇಡೀ ನಾಡಿನ ಆಸ್ತಿಯಾಗಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಉಸ್ತುವಾರಿ ಸಚಿವ ಶ್ರೀರಾಮುಲು ನಮ್ಮ ಬಂಧು. ಆದರೆ, ಯಾವುದೇ ಒತ್ತಡ ಅವರ ಮೇಲೆ ಹೇರಿಲ್ಲ. ನಮ್ಮ ಹಕ್ಕು ನಾವು ಪಡೆದಿದ್ದೇವೆ. ವಾಣಿ ವಿಲಾಸ ಸಾಗರದಿಂದ ಚಳ್ಳಕೆರೆಗೆ 0.25 ಟಿಎಂಸಿ ನೀರನ್ನು ವೇದಾವತಿ ನದಿಗೆ ಹರಿಸಲು ಸರ್ಕಾರ ಆದೇಶಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಿವಿ ಸಾಗರ ಡ್ಯಾಂ ಬಳಿ ತೆರಳಿ ಚಳ್ಳಕೆರೆಯ ವೇದಾವತಿ ನದಿಗೆ ಹರಿಯುತ್ತಿದ್ದ ನೀರು ಬಂದ್ ಮಾಡಿಸಿದ್ದರು. ಇದರ ಪರಿಣಾಮ ಎಂಜಿನಿಯರ್ ಶಿವಪ್ರಕಾಶ್ಗೆ ಅಮಾನತು ಶಿಕ್ಷೆ ಆಗಿದೆ. ನೀರಿನ ವಿಚಾರದಲ್ಲಿ ಅನಗತ್ಯ ರಾಜಕಾರಣ ಸಲ್ಲದು ಎಂದು ರಘುಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.