ಚಿತ್ರದುರ್ಗ: ಆ ವ್ಯಕ್ತಿ ಬುದ್ಧಿಮಾಂದ್ಯ. ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದ. ಕಳೆದು ಹೋದವನಿಗಾಗಿ ಹುಡುಕಾಟ ನಡೆಸಿ ಸುಸ್ತಾದ ಕುಟುಂಬದವರು ಎಲ್ಲಿಯೂ ಆತನ ಸುಳಿವು ಸಿಗದಿದ್ದಾಗ ಸಾವನ್ನಪ್ಪಿರಬಹುದೆಂದು ಭಾವಿಸಿದ್ದರು.
ಚಳ್ಳಕೆರೆ ತಾಲೂಕಿನ ಗಜ್ಜುಗಾನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಎಂಬ ವ್ಯಕ್ತಿ ಕಳೆದ 30 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಇತ್ತೀಚೆಗೆ ಯಾವುದೋ ಕೆಲಸದ ನಿಮಿತ್ಯ ತಿಪ್ಪೇಸ್ವಾಮಿಯ ಕುಟುಂಬದ ಸದಸ್ಯರೊಬ್ಬರು ಹೊಸದುರ್ಗದ ಹೊನ್ನಿಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಈ ಸಮಯದಲ್ಲಿ ಗ್ರಾಮದ ಮನೆಯೊಂದರಲ್ಲಿ ಈತ ರಾಟೆ ತಿರುವ ಕೆಲಸ ಮಾಡಿಕೊಂಡಿರುವುದನ್ನು ಗುರುತಿಸಿದ್ದಾರೆ. ನಂತರದಲ್ಲಿ ಕುಟುಂಬಸ್ಥರೆಲ್ಲಾ ಹೊನ್ನೇಹಳ್ಳಿಗೆ ಹೋಗಿ ಆತನನ್ನು ಕರೆದುಕೊಂಡು ಬಂದಿದ್ದಾರೆ.
ಈ ಕುರಿತು ತಿಪ್ಪೇಸ್ವಾಮಿಯನ್ನು ಮಾತನಾಡಿಸಿದರೆ, ತಾನು ಏನು ಕೆಲಸ ಮಾಡುತ್ತಿದ್ದೆ ಎಂಬುದು ಮಾತ್ರ ನೆನಪಿದೆ, ಹಿಂದಿನ ದಿನಗಳ ನೆನಪಿಲ್ಲ ಎನ್ನುತ್ತಾರೆ. ಕುಟುಂಬಸ್ಥರು ತಿಪ್ಪೇಸ್ವಾಮಿ ಕರೆದುಕೊಂಡು ಬರಲು ಹೋಗುತ್ತಿದಂತೆ ತನ್ನ ಹಿರಿಯ ಅಣ್ಣನನ್ನು ಗುರುತಿಸಿ ಅಪ್ಪಿಕೊಂಡಿದ್ದರಂತೆ.
ಆದರೆ ಆಶ್ರಯ ನೀಡಿದ ವ್ಯಕ್ತಿ ಕುಟುಂಬಸ್ಥರಿಗೆ ಒಪ್ಪಿಸಲು ಹಿಂದೇಟು ಹಾಕಿದ್ದಾರೆ. ಬಳಿಕ ಸರ್ಕಾರಿ ದಾಖಲೆಗಳನ್ನು ತೋರಿಸಿ ಹಿರಿಯರ ಸಮ್ಮುಖದಲ್ಲಿ ಊರಿಗೆ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ: ಇಂದು ಜನೌಷಧಿ ದಿನ: 'ಮೋದಿ ಅಂಗಡಿ'ಯಿಂದ ಕೈಗೆಟಕುವ ದರದಲ್ಲಿ ಔಷಧಿ ಪಡೆಯಿರಿ ಎಂದ ಪ್ರಧಾನಿ