ಚಿತ್ರದುರ್ಗ : ಕೋವಿಡ್ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಬಂದಿದೆ. ಯಾರು ಸಾಲು ಸಾಲು ಹೆಣ ಸುಟ್ಟಿದ್ದು ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ರಾಷ್ಟ್ರೀಯ ಪಕ್ಷವಾಗಿ ಈ ರೀತಿ ಸಣ್ಣತನದ ಮಾತುಗಳನ್ನು ಆಡಬಾರದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಜಿಲ್ಲೆಯ ಮುರುಘಾ ಮಠಕ್ಕೆ ಭೇಟಿ ನೀಡಿ ಜನಾರ್ಶೀವಾದ ಯಾತ್ರೆ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು. ಕೋವಿಡ್ ಸಂದರ್ಭದಲ್ಲಿ ಕೇವಲ ಭಾರತ ಮಾತ್ರವಲ್ಲ. ಅಮೆರಿಕಾ, ಚೀನಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹೆಣ ಸುಟ್ಟಿದ್ದಾರೆ.
ಕೊರೊನಾದಿಂದ ವಿಶ್ವದಲ್ಲಿ ಅನಾನುಕೂಲವಾಗಿದೆ. ಈ ಬಗ್ಗೆ ಪ್ರತಿಪಕ್ಷದವರು ತಿಳಿದುಕೊಂಡು ಮಾತನಾಡಬೇಕು. ಕ್ಷುಲ್ಲಕ ಭಾಷೆ ಬಳಸಲು ಹೇಗೆ ಮನಸ್ಸು ಬರುತ್ತದೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ ಬತ್ತಳಿಕೆಯಲ್ಲಿ ಸುಳ್ಳಿನ ಬಾಣ ಖಾಲಿಯಾಗಿದೆ ಎಂಬ ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಧಾನಿಯಾಗಿ ಮೋದಿಯವರು ಪ್ರಾಣದ ಹಂಗು ತೊರೆದು ವಿಶ್ವಕ್ಕೆ ಸಂದೇಶ ನೀಡಿದ್ದಾರೆ. ಸಮಾಜದ ಕಡೆಯ ವ್ಯಕ್ತಿಯೂ ಅವರ ಕಾರ್ಯ ವೈಖರಿ ನೋಡಿದ್ದಾರೆ.
ಮೋದಿ ಬಗ್ಗೆ ಹೇಳಲು ಕಾಂಗ್ರೆಸ್ ನಾಯಕರ ಬಳಿ ಏನೂ ಇಲ್ಲ. ಅಪಪ್ರಚಾರ ಮಾಡಲು ಏನೂ ಇಲ್ಲ. ಏಳು ವರ್ಷ ಪ್ರಧಾನಿಯಾಗಿ ಒಂದು ಆರೋಪ ಇಲ್ಲ. ಹಾಗಾಗಿ, ಗಾಂಭಿರ್ಯತೆಯಿಂದ ಮಾತನಾಡುವುದು ಒಳ್ಳೆಯದು ಎಂದರು.
ಜನಾಶೀರ್ವಾದ ಯಾತ್ರೆಯಲ್ಲಿ ಜನರು ಭಾವನಾತ್ಮಕವಾಗಿ ಸೇರಿದ್ದಾರೆ. ಕಾಂಗ್ರೆಸ್‌ನವರು ಕೂಡ ಎಲ್ಲಾ ಕಡೆ ಸೇರುತ್ತಿದ್ದಾರೆ. ಕೈಲಾಗದವರು ಮೈಪರಚಿಕೊಂಡರು ಎಂಬಂತೆ ಕೆಲವರು ಮಾಡುತ್ತಿದ್ದಾರೆ. ಕೊವೀಡ್ ನಿರ್ಬಂಧ ನಿಭಾಯಿಸುವುದು ನಮ್ಮ ಧರ್ಮ ಎಂದ ಅವರು, ವಿನಯ್ ಕುಲಕರ್ಣಿಗೆ ಬೇರೆ ಅಲ್ಲ, ಜನಾರ್ದನ್ ರೆಡ್ಡಿಗೆ ಬೇರೆ ಅಲ್ಲ, ಎಲ್ಲರಿಗೂ ಒಂದೇ ಕಾನೂನು ಎಂದರು.
ಆನಂದ್ ಸಿಂಗ್ ಅವರು ಚಿನ್ನದಂತಹ ಮನುಷ್ಯ. ಅವ ಒಂದು ರೀತಿಯಲ್ಲಿ ಎಳೆ ಮಗು ಇದ್ದ ಹಾಗೆ, ಆತನಿಗೆ ಯಾವ ಮುನಿಸಿಲ್ಲ, ಸಿಎಂ ಜೊತೆ ಚರ್ಚಿಸಿದ್ದಾರೆ. ನಿನ್ನೆಯಿಂದ ಅವರ ಕಚೇರಿ ಒಪನ್ ಆಗಿದ್ದು, ಎಲ್ಲಾ ಸರಿ ಹೋಗಿದೆ ಎಂದರು.