ಚಿತ್ರದುರ್ಗ: ಶ್ರವಣ ದೋಷವುಳ್ಳ ಜೋಡಿಯೊಂದು ಪೋಷಕರ ಸಹಕಾರದೊಂದಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡು ಹೊಸಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಜಾತಿ ದೊಡ್ಡದಲ್ಲ ಎರಡು ಮನಸ್ಸುಗಳು ಮುಖ್ಯ ಎಂದು ತೋರಿಸಿದ್ದಾರೆ.
ದಾವಣಗೆರೆಯ ಭಗತ್ ಸಿಂಗ್ ನಗರದ ಮಂಜಣ್ಣ ಮತ್ತು ಯಮುನಮ್ಮ ಎಂಬ ದಂಪತಿ ಪುತ್ರ ಪರುಶುರಾಮ ಎಂಬುವರು ವರ. ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದ ಮಂಜುನಾಥ ಮತ್ತು ಮಂಗಳಮ್ಮರ ದಂಪತಿಯ ಪುತ್ರಿ ಸೌಮ್ಯ ಎಂಬುವರು ವಧುವಾಗಿದ್ದಾರೆ. ಇವರು ಕಿವುಡ ಮತ್ತು ಮೂಕ ನವದಂಪತಿ. ಇವರ ವಿವಾಹ ಮಹೋತ್ಸವವನ್ನು ವಧುವಿನ ಗ್ರಾಮವಾದ ಸಿದ್ದಾಪುರದಲ್ಲಿ ಸಂಭ್ರಮದಿಂದ ಮಾಡಲಾಯಿತು.
ವರನ ತಂದೆ,ತಾಯಿ ಸ್ವಜಾತಿಯಲ್ಲಿ ಸಾಕಷ್ಟು ವಧುವನ್ನು ನೋಡಿದ್ರೂ, ಸಂಬಂಧಿಕರು ಸಹ ಯಾರು ಹುಡುಗಿಯನ್ನು ಕೊಟ್ಟು ಮದುವೆ ಮಾಡಲು ಮುಂದೆ ಬರಲಿಲ್ಲ. ಇಂತಹ ಸಮಯದಲ್ಲಿ ಇವರ ವಿವಾಹಕ್ಕೆ ಬೆಂಬಲವಾಗಿ ನಿಂತವರು ದಾವಣಗೆರೆ ಭಗತ್ ಸಿಂಗ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಿಕಿ ಸುಜಾತ. ಸೌಮ್ಯಳ ಪೋಷಕರ ಮನವೊಲಿಸಿ ನೇಕಾರರು-ಕುರುಬ ಸಾಮುದಾಯದಲ್ಲಿ ಸಂಬಂಧ ಬೆಳೆಸಿದರು.
ಸೌಮ್ಯ SSLC ಮುಗಿಸಿ ಮೈಸೂರಿನಲ್ಲಿ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಆರ್ಕಿಟೆಕ್ ಪದವಿ ಮುಗಿಸಿದ್ದಾರೆ. ಪರಶುರಾಮ ಕೂಡ SSLC ಮುಗಿಸಿ ರಿಲಯನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಜಾತಿ, ಧರ್ಮ, ಪಂಥ, ಪ್ರತಿಷ್ಠೆಯನ್ನು ಬಿಟ್ಟು ಕುವೆಂಪು ಅವರ ಮಂತ್ರ ಮಾಂಗಲ್ಯ ಮೂಲಕ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಕಂದಿಕೆರೆ ಹಾಗೂ ಗ್ರಾಮಸ್ಥರು ನವ ಜೋಡಿಗೆ ಶುಭ ಹಾರೈಸಿದರು.