ಚಿತ್ರದುರ್ಗ: ಕೆಲ ದಿನಗಳ ಹಿಂದೆ ನಡೆದಿದ್ದ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸರು ಐವರು ಅಂತಾರಾಜ್ಯ ಖದೀಮರನ್ನು ಬಂಧಿಸಿದ್ದಾರೆ.
ತಿಪ್ಪೇಶ (22) , ಕಲ್ಲೇಶ (22), ರಮೇಶ (30),ಪ್ರಸಾದ್ (21), ರಾಮು (30) ಬಂಧಿತ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಆಂಧ್ರಪ್ರದೇಶದ ಅಮರಾಪುರ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ 1 ಲಕ್ಷ ರೂ. ನಗದು, 26 ಸಾವಿರ ರೂ. ಮೌಲ್ಯದ ದೇವರ ಬೆಳ್ಳಿ ಒಡವೆಗಳು, ಕೃತ್ಯಕ್ಕೆ ಬಳಸುತ್ತಿದ್ದ 5 ಮೋಟಾರ್ ಸೈಕಲ್‌ಗಳು ಸೇರಿದಂತೆ ಒಟ್ಟು 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಬಟ್ಟೆ, ಪಾತ್ರೆ ಮತ್ತು ಬೆಡ್‌ಶೀಟ್ ವ್ಯಾಪಾರ ಮಾಡುವ ನೆಪದಲ್ಲಿ ಹಗಲಿನಲ್ಲಿ ವಿವಿಧ ಹಳ್ಳಿಗಳನ್ನು ತಿರುಗಾಡಿ ಗ್ರಾಮದ ಒಳ ಹಾಗೂ ಹೊರ ಭಾಗದಲ್ಲಿರುವ ದೇವಸ್ಥಾನಗಳನ್ನು ವೀಕ್ಷಿಸಿದ್ದರು. ಬಳಿಕ ರಾತ್ರಿ ವೇಳೆ ಗುಂಪಾಗಿ ಹೋಗುತ್ತಿದ್ದ ಖದೀಮರು, ದೇವಾಲಯದ ಶೆಟರ್ಸ್ ಮತ್ತು ಬಾಗಿಲುಗಳನ್ನು ಕಬ್ಬಿಣದ ಆಯುಧಗಳಿಂದ ಹೊಡೆದು ಅಲ್ಲಿದ್ದ ಹಣದ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಇನ್ನೂ 5 ದಿನ ಭಾರಿ ಮಳೆ: ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಬೆಳಗಾವಿ ಡಿಸಿ ಸೂಚನೆ