ಚಿತ್ರದುರ್ಗ : ಎರಡು ವರ್ಷಗಳ ಹಿಂದೆ ಜಮೀನಿನಲ್ಲಿ ಸಿಕ್ಕಿದ್ದ ಸುಮಾರು 800 ವರ್ಷಗಳ ಹಿಂದಿನದ್ದು ಎನ್ನಲಾದ ದೇವರ ವಿಗ್ರಹವನ್ನು ತಡರಾತ್ರಿ ಕಳ್ಳರು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದಲ್ಲಿ ನಡೆದಿದೆ.
ಜೆಸಿಬಿಯಿಂದ ಜಮೀನಿನಲ್ಲಿ ಮಣ್ಣು ಹಸನುಗೊಳಿಸುವಾಗ ಹೂವಿನಹೊಳೆ ಗ್ರಾಮದ ಗಿರಿಸ್ವಾಮಿ ಮತ್ತು ವೆಂಕಟರಮಣಪ್ಪ ಅವರ ಜಾಗದಲ್ಲಿ ಕೆಲವು ವಿಗ್ರಹಗಳು ದೊರೆತಿದ್ದವು. ಶಂಕು, ಚಕ್ರ, ಗದೆ, ಕಿರೀಟ, ಜನಿವಾರ ಸಹಿತವಿದ್ದ 4 ಅಡಿ ಮೂರ್ತಿ ದೊರೆತಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿತ್ತು. ಈ ವಿಗ್ರಹದ ಜೊತೆಗೆ ಎರಡು ಸಣ್ಣ ಲಿಂಗಗಳು, ನಂದಿ ವಿಗ್ರಹ, ಶಿವನ ಪೀಠ, ಹಾಗೂ ದೇವರ ಶಿಲೆ ಸಿಕ್ಕ ಸ್ಥಳದಲ್ಲೇ ಹಳೆಯ ಕಲ್ಲುಗಳು, ಇಟ್ಟಿಗೆ ದೊರೆತಿದ್ದವು.
ಸಿಕ್ಕಿದ್ದ ವಿಗ್ರಹವನ್ನು ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಇಟ್ಟು ಪ್ರತಿದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಇದೀಗ ಕಳ್ಳರು ಮೂರ್ತಿಯನ್ನು ಕಳವು ಮಾಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗುಡ್ಲೆಕುಂಟೆ ಗ್ರಾಮ ಇತ್ತು ಎಂಬ ನಂಬಿಕೆ : ಈ ದೇವರ ವಿಗ್ರಹ ದೊರೆತ ಸ್ಥಳದಲ್ಲಿ ಗುಡ್ಲೆಕುಂಟೆ ಎಂಬ ಗ್ರಾಮವಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಜಾಗದಲ್ಲಿ ಹಿಂದೆ ಕಾಡುಗೊಲ್ಲರು ವಾಸಿಸುತ್ತಿದ್ದು, ಗೊಲ್ಲರಹಟ್ಟಿ ಇದಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಗ್ರಹ ಕಳ್ಳತನ ಕುರಿತು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.