ಹುಬ್ಬಳ್ಳಿ: ಕಳೆದ ವಾರದಲ್ಲಿ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಾಲು ಸಾಲು ರಜೆಯ ಇದ್ದುದ್ದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಸಂಚಾರ ನಡೆಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದಾಖಲೆಯ ಆದಾಯ ಸಂಗ್ರಹವಾಗಿದೆ.
ದೀಪಾವಳಿ, ವಾರಾಂತ್ಯ ಜತೆಯಲ್ಲೇ ಬಂದಿದ್ದರಿಂದ ಸರಣಿ ರಜೆಯ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಸ್ವಂತ ಊರುಗಳಿಗೆ ತೆರಳಿದ್ದರು. ಹಬ್ಬ ಮುಗಿದ ನಂತರ ಬಹುತೇಕ ಜನರು ಸಂಸ್ಥೆಯ ಬಸ್ಗಳಲ್ಲಿ ಬೆಂಗಳೂರು, ಮಂಗಳೂರು, ಗೋವಾ, ಹೈದರಾಬಾದ್, ಪುಣೆ ಮುಂತಾದ ಸ್ಥಳಗಳಿಗೆ ಪ್ರಯಾಣಿಸಲು ಹೆಚ್ಚಿನ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ದಿನಾಂಕ 30-10-2024 ಮತ್ತು 04-11-2024 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅವತಾರ್ ಆನ್ಲೈನ್ ಬುಕ್ಕಿಂಗ್ನಲ್ಲೂ ಹೆಚ್ಚಳವಾಗಿದೆ. ಸದರಿ ದಿನಗಳಂದು ಕ್ರಮವಾಗಿ 8,998 ಮತ್ತು 7,556 ಆನ್ಲೈನ್ ಸೀಟುಗಳು ಬುಕ್ಕಿಂಗ್ ಆಗಿದ್ದು, ಮುಂಗಡ ಬುಕಿಂಗ್ನಿಂದ ಒಟ್ಟು 1.06 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
04-11-2024 ಸೋಮವಾರ ಒಂದೇ ದಿನ ಒಟ್ಟಾರೆ 27 ಲಕ್ಷ ಜನ ಪ್ರಯಾಣಿಸಿದ್ದಾರೆ. ಇದರಲ್ಲಿ ಮಹಿಳಾ ಪ್ರಯಾಣಿಕರು 16.66 ಲಕ್ಷ ಜನ ಪ್ರಯಾಣ ಮಾಡಿದ್ದು, ಆದಾಯ 8.70 ಕೋಟಿ ರೂ. ಆಗಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆ ಮೂಲಕ ತಿಳಿಸಿದೆ.
ಇದು ಸಂಸ್ಥೆಯ ಇತಿಹಾಸದಲ್ಲಿಯೇ ಅತಿ ಹೆಚ್ಚಿದ್ದಾಗಿದೆ. ಈ ಸಾಧನೆಗೆ ಸಂಸ್ಥೆಯ ಎಲ್ಲ ನೌಕರರು ಹಾಗೂ ಅಧಿಕಾರಿಗಳು ಕಾರಣರು. ಈ ಅವಧಿಯಲ್ಲಿ ಹೆಚ್ಚಿನ ಶ್ರಮವಹಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಿದ್ದಕ್ಕಾಗಿ ಚಾಲನಾ ಸಿಬ್ಬಂದಿ, ತಾಂತ್ರಿಕ ವರ್ಗದವರು ಮತ್ತು ಅಧಿಕಾರಿ/ಸಿಬ್ಬಂದಿ ವರ್ಗದವರನ್ನು ಅಭಿನಂದಿಸುವೆ. ಸಂಸ್ಥೆಯ ವಾಹನಗಳಲ್ಲಿ ಶಾಂತತೆಯಿಂದ ಪ್ರಯಾಣಿಸಿ ಸಂಸ್ಥೆಯೊಂದಿಗೆ ಸಹಕರಿಸಿದ್ದಕ್ಕಾಗಿ ಸಾರ್ವಜನಿಕ ಪ್ರಯಾಣಿಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಆರ್ಥಿಕತೆ ಏರಿಕೆ; 1,03,683 ಕೋಟಿ ರೂ. ಆದಾಯ ಸಂಗ್ರಹ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ