ಚಿತ್ರದುರ್ಗ: ಕೊರೊನಾ ಸೋಂಕು ದೃಢಪಟ್ಟಿರುವ ಉತ್ತರ ಪ್ರದೇಶ ಮೂಲದ ಕಾರ್ಮಿಕರನ್ನ ಚಳ್ಳಕೆರೆ ನಗರದ ಬಿಸಿಎಂ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಹಾಸ್ಟೆಲ್‍ಗೆ ಡಿಹೆಚ್‍ಒ ಡಾ. ಪಾಲಾಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರ ಪ್ರದೇಶ ಮೂಲದ ಕಾರ್ಮಿಕರು ತಮಿಳುನಾಡಿನ ಚೆನ್ನೈನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಲಾಕ್‍ಡೌನ್ ಮುಗಿದ ನಂತರ ವಾಹನವೊಂದರಲ್ಲಿ ತೆರಳುತ್ತಿರುವಾಗ ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಗೇಟ್ ಚೆಕ್ ಪೋಸ್ಟ್ನಲ್ಲಿ ಪರಿಶೀಲನೆಗೆ ಒಳಪಡಿಸಲಾಗಿತ್ತು.
ಯಾವುದೇ ಅನುಮತಿ ಪತ್ರ ಇಲ್ಲದೆ ಇವರು ಪ್ರಯಾಣಿಸುತ್ತಿದ್ದರಿಂದ ಇವರನ್ನು ಚಳ್ಳಕೆರೆಯ ಆದರ್ಶ ಶಾಲೆಯಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಿ 59 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 20 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಕೊರೊನಾ ವೈರಸ್ ದೃಢಪಟ್ಟ ಕಾರಣ ಚಳ್ಳಕೆರೆ ಬಿಸಿಎಂ ಹಾಸ್ಟೆಲ್‍ನಲ್ಲಿ ವೈದ್ಯಕೀಯ ನೆರವಿನೊಂದಿಗೆ ಅವರನ್ನ ಕ್ವಾರಂಟೈನ್ ಮಾಡಲಾಗಿದೆ.
ತಾಲೂಕು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಹೆಚ್‍ಒ, ಬಿಸಿಎಂ ಹಾಸ್ಟೆಲ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಕೊಠಡಿ ಹಾಗೂ ಸ್ವಚ್ಛ ಮಾಡಿದ ತಟ್ಟೆ ಲೋಟದೊಂದಿಗೆ ಊಟದ ವ್ಯವಸ್ಥೆ, ಸೋಂಕಿತರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ.
ಸೋಂಕು ದೃಢಪಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು 9 ಜನ ಶುಶ್ರೂಷಕಿಯರು, 6 ಜನ ಡಿ ದರ್ಜೆ ನೌಕರರನ್ನು ನಿಯೋಜನೆ ಮಾಡಿ ಅಗತ್ಯ ಔಷಧ ಮತ್ತು ಸ್ವಯಂ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.