ಚಿತ್ರದುರ್ಗ: ಕುಖ್ಯಾತ ಅಂತಾರಾಜ್ಯ ದರೋಡೆಕೋರರನ್ನ ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಡಿಕೆ ತುಂಬಿದ ಲಾರಿ ಹಿಂಬಾಲಿಸಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಚಾಲಕನ ಸಮೇತವಾಗಿ ಜ. 5ರಂದು ಲಾರಿ ಅಪಹಣ ಮಾಡಿ ಖದೀಮರು ಪರಾರಿಯಾಗಿದ್ದರು. ಬಳಿಕ ಮಂಡ್ಯದಲ್ಲಿ ಲಾರಿ, ಹುಬ್ಬಳ್ಳಿಯಲ್ಲಿ ಚಾಲಕನ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ. ಈ ಕುರಿತಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಅಡಿಕೆ ತುಂಬಿದ ಲಾರಿ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ರಿಜ್ವಾನ್, ಲಿಂಗರಾಜ್ ಹಾಗೂ ಇಬ್ಬರು ಅಂತಾರಾಜ್ಯದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರಿಂದ 90 ಲಕ್ಷ ಮೌಲ್ಯದ ಒಟ್ಟು 300 ಚೀಲ ಅಡಿಕೆ, ಲಾರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಅಶ್ರಫ್ ಅಲಿ ಸೇರಿದಂತೆ ಇತರೆ 11 ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.