ಚಿತ್ರದುರ್ಗ: ಜಯಮ್ಮ ಬಾಲರಾಜ್ ಅವರನ್ನು ವಿಧಾನ ಪರಿಷತ್ ಸದಸ್ಯೆಯಾನ್ನಾಗಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ, ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸಲು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದ್ದು ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಮಯ್ಯ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಜೆ.ಬಿ ಬಾಲಕೃಷ್ಣ ಯಾದವ್ ಬಿಜೆಪಿ ವಿರುದ್ಧ ಹರಿಹಾಯ್ದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದಿದ್ದ ಕಾಡುಗೊಲ್ಲರು ಎದ್ದು ಮಾತನಾಡುತ್ತಿದ್ದಾರೆ, ಅವರ ಅಸ್ಮಿತೆ ಕಾಣಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ನಮ್ಮ ಕಾಂಗ್ರೆಸ್ ಪಕ್ಷ, ಆದರೆ ನಾಳೆ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಇದ್ದು, ಕಾಡುಗೊಲ್ಲ ಸಮುದಾಯದ ಬಗ್ಗೆ ಸಮಾಜಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಐದಾರು ಜನ ಕಾಡುಗೊಲ್ಲ ಸಮಾಜದ ಮುಖಂಡರು ಸೇರಿ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಇದೆ ಎಂದು ಘೋಷಣೆ ಮಾಡಿರುವುದನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತೇನೆ. ನಿಮ್ಮ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಎಂದು ಕಾಡುಗೊಲ್ಲ ಸಮಾಜದ ಮುಖಂಡರ ಬಳಿ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಎಮ್ಎಲ್ಸಿ ಜಯಮ್ಮ ಬಾಲರಾಜ್ ಅವರು ವಿಧಾನ ಪರಿಷತ್ನಲ್ಲಿ ತಮ್ಮ ಕಾಡುಗೊಲ್ಲ ಸಮುದಾಯದ ಸಮಸ್ಯೆಗಳನ್ನು ಅತ್ತು ಕೂಗಿ ಹೇಳಿದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊಲ್ಲರು ವಾಸಿಸುತ್ತಿದ್ದ ಹಾಡಿ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಸರ್ಕಾರಿ ಸೌಲಭ್ಯ ಕಲ್ಪಿಸಿದ್ದರು ಎಂದರು.