ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಮತದಾನದ ವೇಳೆ ಘರ್ಷಣೆ ಉಂಟಾಗಿ, ಕಲ್ಲು ತೂರಾಟ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಕಾಲ್ಗೆರೆ ಗ್ರಾಪಂ ವ್ಯಾಪ್ತಿಯ ಆಜಾದ್ ಬಡಾವಣೆಯಲ್ಲಿ ನಡೆದಿದೆ.
ಮತಗಟ್ಟೆ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ತಮ್ಮ ತಮ್ಮವರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸುತ್ತಾರೆಂದು ಗಲಾಟೆ ನಡೆದಿದೆ. ಆಜಾದ್ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ವಾತಾವರಣ ತಿಳಿಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಕಾಲ್ಗೆರೆ ಬೂತ್ ನಂ. 18ರ ಅಭ್ಯರ್ಥಿ ಜಾಫರ್ ಮತ್ತು ದಾದಾಪೀರ್ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ. ಘರ್ಷಣೆ ವೇಳೆ ಮಹ್ಮದ್ ಅಲಿ (32), ದಾದಾವುಲ್ಲಾ (60), ಅಕ್ಬರ್ (48), ಚಮನ್ ಬಿ (55) ಎಂಬುವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.