ಚಿತ್ರದುರ್ಗ: ಆ ಗ್ರಾಮದ ಜನ ರಸ್ತೆಯಲ್ಲಿ ಓಡಾಡಬೇಕೆಂದರೆ ಬೆಚ್ಚಿ ಬೀಳ್ತಾರೆ. ಮನೆಯ ಕಿಟಕಿ, ಬಾಗಿಲು ತೆರೆದಿಡಲು ಹೆದರುತ್ತಾರೆ. ಒಬ್ಬೊಬ್ಬರೇ ನಡೆದುಕೊಂಡು ಹೋಗುವುದನ್ನೇ ಕೈಬಿಟ್ಟಿದ್ದಾರೆ. ಒಂದೊಮ್ಮೆ ಒಂಟಿಯಾಗಿ ಓಡಾಡುವ ಧೈರ್ಯ ಮಾಡಿದ್ರೆ ಜೆಟ್ ವಿಮಾನದಷ್ಟೇ ಸ್ಪೀಡ್ ಆಗಿ ಪಕ್ಷಿಯೊಂದು ಬಂದು ತಲೆ ಮೇಲೆ ಕುಟುಕಿ ಹೋಗುತ್ತದೆ.
ಹೌದು, ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ ಕಳೆದ 6 –7 ತಿಂಗಳುಗಳಿಂದ ಒಂಟಿ ಕಾಗೆಯೊಂದು ಗ್ರಾಮಸ್ಥರಿಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡ್ತಿದೆ. ಕಾಗೆಯ ವಿಚಿತ್ರ ಕಾಟದಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಒಂಟಿ ಮನುಷ್ಯರಿಗೆ ಕುಟುಕುವ ಈ ಕಾಗೆಗೆ ಮನೆ ಕಿಟಕಿಯ ಗಾಜು, ಬೈಕ್ ಮಿರರ್, ಕಾರಿನ ಗ್ಲಾಸ್ ಕಂಡರೂ ಆಗೋದಿಲ್ಲವಂತೆ. ಗಾಜುಗಳೇನಾದ್ರೂ ಕಣ್ಣಿಗೆ ಬಿದ್ರೆ ಸಾಕಾಗೋವರೆಗೂ ಕುಟುಕುತ್ತಲೇ ಇರುತ್ತದೆ. ಹೀಗೆ ಕಾಗೆ ಕುಟುಕಿ ಕುಟುಕಿ ಕೆಲವರ ತಲೆ ಗಾಯ ಆಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಆಂಜನೇಯ ಸ್ವಾಮಿಯ ಶಾಪ: ಈ ಕಾಗೆಯೊಂದು ಇಷ್ಟು ಸಿಟ್ಟಿನಿಂದ ಗ್ರಾಮಸ್ಥರಿಗೆ ಕಾಟ ಕೊಡ್ತಿರೋದಕ್ಕೆ ಗ್ರಾಮದ ಆಂಜನೇಯ ಸ್ವಾಮಿಯ ಶಾಪವೇ ಕಾರಣವಂತೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಪಾಳು ಬಿದ್ದು, ಹಲವು ವರ್ಷಗಳೇ ಕಳೆದಿವೆಯಂತೆ.
ಅದರ ಅಭಿವೃದ್ಧಿ ಕಾರ್ಯ, ಮರು ಪ್ರತಿಷ್ಠಾಪನೆಗೆ, 10 ವರ್ಷದ ಹಿಂದೆ ಗ್ರಾಮಸ್ಥರು ಕೈ ಹಾಕಿದ್ದರು. ಆದರೆ, ಆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಆಂಜನೇಯ ಸ್ವಾಮಿ ಗ್ರಾಮಕ್ಕೆ ಶಾಪ ಹಾಕಿದ್ದಾರೆ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ ಶನಿ ಮಹಾತ್ಮ ವಾಹನವಾಗಿರುವ ಕಾಗೆ ರೂಪದಲ್ಲಿ ಈ ರೀತಿ ಕಾಟ ಕೊಡ್ತಿದ್ದಾನೆ ಎಂಬುದು ಗ್ರಾಮಸ್ಥರ ವಾದ.
ಒಟ್ಟಾರೆ ಕಳೆದ 6 ತಿಂಗಳಿಂದ ಕಾಗೆ ಕಾಟಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮರು ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ. ಜತೆಗೆ ಕಾಗೆ ಕಾಟ ತಪ್ಪುತ್ತದೆ ಎಮಬುವುದು ಇಲ್ಲಿನ ಗ್ರಾಮಸ್ಥರ ನಂಬಿಕೆ.
ಇದನ್ನೂ ಓದಿ: ಕೋವಿಡ್ನಿಂದ ಕಾಫಿ ಬೆಳೆಗಾರರು ಕಂಗಾಲು: ಕಾರ್ಮಿಕರ ಕೊರತೆಯಿಂದ ಗಿಡದಲ್ಲೇ ಒಣಗಿದ ಬೆಳೆ