ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಚುನಾವಣೆಯ ಕಾವು ಏರುತ್ತಿದೆ. ಕೈ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಕಲಿಗಳ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.
ಹೌದು, ಸದ್ಯ ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಬಿಜೆಪಿ ಪಾಳೆಯ ಕೂಡ ಚಿತ್ರದುರ್ಗದಲ್ಲಿ ಕಮಲ ಅರಳಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ಇಬ್ಬರಲ್ಲಿ ಚಿತ್ರದುರ್ಗದ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ನಾಡಿನ ಕೇಂದ್ರ ಬಿಂದು ಆಗಿರುವ ಮಧ್ಯಕರ್ನಾಟಕದ ಹೆಬ್ಬಾಗಿಲು, ರಾಜಕೀಯ ಶಕ್ತಿ ಕೇಂದ್ರ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೈ ಕಮಲದ ನಡುವೆ ಪೈಪೋಟಿ ಆರಂಭವಾಗಿದೆ. ಕಾಂಗ್ರೆಸ್‌ನಿಂದ ಬಿ ಎನ್ ಚಂದ್ರಪ್ಪ ಹಾಗೂ ಬಿಜೆಪಿಯಿಂದ ಎ ನಾರಾಯಣಸ್ವಾಮಿ ಕಣಕ್ಕಿಳಿದಿದ್ದಾರೆ.
ಈವರೆಗೆ ಚಿತ್ರದುರ್ಗ ಕ್ಷೇತ್ರದಲ್ಲಿ 16 ಸಂಸತ್ ಚುನಾವಣೆಗಳು ನಡೆದಿದ್ದು, ಇದರಲ್ಲಿ ಬಹುತೇಕವಾಗಿ 11 ಬಾರಿ ಕಾಂಗ್ರೆಸ್ ಪಕ್ಷದವರೇ ಗೆದ್ದು ಸಂಸತ್ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಜಾ ಸೋಸಿಯಲಿಸ್ಟ್ ಪಾರ್ಟಿ, ಸ್ವತಂತ್ರ ಪಕ್ಷ, ಜನತಾ ದಳ, ಜೆಡಿಯು ಹಾಗೂ ಬಿಜೆಪಿ ತಲಾ ಒಂದೊಂದು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು ರಾಜ್ಯ ಸರ್ಕಾರ ಮೈತ್ರಿಯಾಗಿದ್ದು, ಈ ಬಾರಿ ಬಿಜೆಪಿ ಮತ್ತು ಮೈತ್ರಿ ಸರ್ಕಾರದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಚಳ್ಳಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಕೈ ಶಾಸಕ ಟಿ ರಘುಮೂರ್ತಿ ಇದ್ದು, ಚಳ್ಳಕೆರೆ ಕ್ಷೇತ್ರದ ಮತದಾರರನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದ್ದಾರೆ. ಇನ್ನು ಚಿತ್ರದುರ್ಗ, ಮೊಳಕಾಲ್ಮೂರು, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆಯಲ್ಲಿ ಬಿಜೆಪಿ ಶಾಸಕರಿದ್ದು, ಕಮಲಕ್ಕೆ ಮತಗಳು ಪರಿವರ್ತನೆ ಆಗುವ ಸಾಧ್ಯತೆ ಇದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಕಾಂಗ್ರೆಸ್ ಹಾಗೂ ಶಿರಾದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅಲ್ಲಿ ಮತದಾರ ಕಾಂಗ್ರೆಸ್ ಕೈ ಹಿಡಿಯುವ ಸಾಧ್ಯತೆಗಳಿವೆ.
2009 ರಲ್ಲಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದ ಬಿಜೆಪಿ ಈ ಬಾರಿ ಕೂಡ ಬಿರುಸಿನ ಚಟುವಟಿಕೆ ನಡೆಸಿದೆ. 2009 ರಲ್ಲಿ ಒಮ್ಮೆ ಬಿಜೆಪಿಯಿಂದ ಗೆದ್ದಿದ್ದ ಜನಾರ್ದನಸ್ವಾಮಿ ಕಳೆದ ಬಾರಿ ಮೂಡಿಗೆರೆ ಚಂದ್ರಪ್ಪ ಎದುರು ಮುಖಭಂಗ ಅನುಭವಿಸಿದರು. ಆದ್ರೆ, ಜನಸಾಮಾನ್ಯರ ಕೈಗೆ ಸಿಗದೆ ಕಾರ್ಯಕ್ರಮಗಳಿಗೆ ಸಿಮಿತವಾಗಿದ್ದ ಜನಾರ್ದನಸ್ವಾಮಿಯ ವರ್ತನೆಯಿಂದ ಜನ ಬೇಸತ್ತು ಚಂದ್ರಪ್ಪರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೊರ ಜಿಲ್ಲೆಯವರು. ಆದರೂ ಆರು ಜನ ಕಾಂಗ್ರೆಸ್ ಶಾಸಕರ ಪರಿಶ್ರಮ ಚಂದ್ರಪ್ಪ ಅವರನ್ನು ಸಂಸದರನ್ನಾಗಿ ಮಾಡಿತ್ತು. ಕಳೆದ ಬಾರಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರು ಭೋವಿ ಸಮಾಜದಿಂದ ಸ್ಪರ್ಧಿಸಿದ್ದು ಚಂದ್ರಪ್ಪರಿಗೆ ಪ್ಲಸ್ ಪಾಯಿಂಟ್ ಆಗಿತ್ತು.
ಚಿತ್ರದುರ್ಗ ಲೋಕಸಭಾ ಚುನಾವಣೆಯ ಇತಿಹಾಸ…
1998 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಶೇ. 42 (3,21,930) ಮತ ಪಡೆದು ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆ ಕೂಡಾ ಇವರಿಗಿದೆ. ಲೋಕಶಕ್ತಿ ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಶೇ 35 (2,63,609) ಮತ ಪಡೆದು ಪರಾಭವಗೊಂಡರು. ಒಟ್ಟು ಆರು ಮಂದಿ ಕಣದಲ್ಲಿದ್ದರು.
ಮತ್ತೆ ಮರು ವರ್ಷವೇ ನಡೆದ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದ ಚಿತ್ರನಟ ಶಶಿಕುಮಾರ್ ಶೇ 44 (3,70,793) ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಮೂಡಲಗಿರಿಯಪ್ಪ ಶೇ. 43 (3,59,615) ಮತ ಪಡೆದು ಕಡಿಮೆ ಅಂತರದಿಂದ ಸೋಲು ಕಂಡಿದ್ದರು.
2004ರಲ್ಲಿ ಕಾಂಗ್ರೆಸ್ ಮತ್ತೆ ಮತದಾರರ ಮನ್ನಣೆ ಪಡೆಯುವಲ್ಲಿ ಯಶಸ್ಸು ಕಂಡಿತ್ತು. ನಿವೃತ್ತ ನ್ಯಾಯಾದೀಶ ಎನ್.ವೈ. ಹನುಮಂತಪ್ಪ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಶೇ. 35 (3,22,609) ಮತ ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಆಗಿದ್ದ ಪಿ. ಕೋದಂಡರಾಮಯ್ಯ ಶೇ. 31 (2,85,149) ಮತ ಪಡೆದು ಮತ್ತೊಮ್ಮೆ ಸೋಲು ಕಂಡರು.
ಸತತ ಪ್ರಯತ್ನದ ಮೂಲಕ ಬಿಜೆಪಿ 2009ರಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿಯ ಜನಾರ್ದನಸ್ವಾಮಿ ಶೇ. 44 (3,70,920) ಮತ ಪಡೆದಿದ್ದರು. ಕಾಂಗ್ರೆಸ್‌ನ ಬಿ.ತಿಪ್ಪೇಸ್ವಾಮಿ ಶೇ. 28 (2,35,349) ಮತ ಪಡೆದು ಪರಾಭವಗೊಂಡಿದ್ದರು.
2014ರಲ್ಲಿ ಈ ಕ್ಷೇತ್ರ ಮತ್ತೆ ಕಾಂಗ್ರೆಸ್‌ಗೆ ಒಲಿಯಿತು. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಶೇ 42 (4,67,511) ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ಜನಾರ್ದನಸ್ವಾಮಿ ಶೇ. 33 (3,66,220), ಜೆಡಿಎಸ್‌ನ ಗೂಳಿಹಟ್ಟಿ ಶೇಖರ್ ಶೇ. 18 (2,02,108) ಮತ ಪಡೆದು ಪರಾಭವಗೊಂಡರು.
ಜಿಲ್ಲೆಯ ಪ್ರಮುಖ ಸಮಸ್ಯೆಗಳು:
ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಫ್ಲೋರೈಡ್ಯುಕ್ತ ನೀರು ಇರುವುದರಿಂದ ಇಲ್ಲಿಯ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಜಿಲ್ಲೆಗೆ ವರದಾನವಾಗಲಿರುವ ಭದ್ರಾ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಿದ್ದು, ಕಾಂಗ್ರೆಸ್ ಸರ್ಕಾರ ಸ್ವಲ್ಪ ಮಟ್ಟಿಗೆ ವೇಗ ನೀಡಿತ್ತು. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ, ತುಮಕೂರು, ಚಿತ್ರದುರ್ಗ, ದಾವಣೆಗೆರೆ ಮಾರ್ಗವಾಗಿ ರೈಲು ಬಿಡ್ತೀವಿ ಅನ್ನೋ ರಾಜಕಾರಣಿಗಳ ಭರವಸೆ ಭರವಸೆ ಆಗಿಯೇ ಉಳಿದಿದೆ. ಭೀಕರ ಬರಗಾಲ ಎದುರಾಗಿದ್ದು, ಜನರು ಮಾಡಲು ಕೆಲಸಗಳಿಲ್ಲದೇ ಗುಳೆ ತೆರಳಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸುವುದು ಕನಸಾಗಿಯೇ ಉಳಿದಿದೆ.
ಈಗಾಗಲೇ ಸಂಸದ ಬಿ ಎನ್ ಚಂದ್ರಪ್ಪ ಎಂಟು ಕ್ಷೇತ್ರಗಳನ್ನು ಒಮ್ಮೆ ಸುತ್ತು ಹಾಕಿ ಮುಖಂಡರ ಬಳಿ ಚರ್ಚೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಬ್ಬರೇ ಕಾಂಗ್ರೆಸ್ ಶಾಸಕರಿದ್ದರೂ ಮಾಜಿ ಶಾಸಕರು, ಮಾಜಿ ಸಚಿವರು ಮತ್ತೆ ತಮ್ಮ ಕೈ ಬಲಪಡಿಸಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಹಾಲಿ ಸಂಸದರು. ಅದೇ ವಿಶ್ವಾಸದಲ್ಲಿ ಬಿರುಸಿನಿಂದ ಹೆಜ್ಜೆ ಹಾಕುತ್ತಿದ್ದಾರೆ.
ಇನ್ನು ಸಂಸದ ಚಂದ್ರಪ್ಪ ಬೆನ್ನಿಗೆ ಜಿಲ್ಲೆಯ ಒಕ್ಕಲಿಗರು, ಯಾದವರ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ನಿಂತಿದ್ದಾರೆ. ಮತ್ತೆ ಕೋಟೆ ನಾಡಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಚಂದ್ರಪ್ಪರ ಅಭಿಮಾನಿ ಬಳಗ ಟೊಂಕ ಕಟ್ಟಿ ನಿಂತಿದೆ ಎಂದು ಹೇಳಲಾಗ್ತಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ಹಾಗೂ ಜಾತಿಯ ಬಲಾಬಲ:
ಈ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 13,39,248 ಮತದಾರರಿದ್ದಾರೆ. ಈ ಪೈಕಿ ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹೆಚ್ಚು ಅಂದರೆ 3.40 ಲಕ್ಷ ಮತಗಳಿವೆ. ಇನ್ನು ಪರಿಶಿಷ್ಟ ಪಂಗಡ 2.58 ಲಕ್ಷ, ಲಿಂಗಾಯತ 1.54 ಲಕ್ಷ, ಕುರುಬ 1.05 ಲಕ್ಷ, ಯಾದವ 1.45 ಲಕ್ಷ, ಒಕ್ಕಲಿಗರು 1.45 ಲಕ್ಷ, ಮುಸ್ಲಿಂ 1.70 ಲಕ್ಷ ಇತರ ಜಾತಿಯವರು ಸೇರಿ ಒಟ್ಟು 2.50 ಲಕ್ಷ ಮತದಾರರು ಕ್ಷೇತ್ರದಲ್ಲಿದ್ದಾರೆ.
ಗೆಲುವಿನ ಲೆಕ್ಕಾಚಾರ:…
ಚಿತ್ರದುರ್ಗ ಮತ್ತು ಬಳ್ಳಾರಿ ಗಡಿ ಜಿಲ್ಲೆಗೆ ಸೇರಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಎನ್ ವೈ ಗೋಪಾಲಕೃಷ್ಣ ಅವರ ಪಾತ್ರ ಮುಖ್ಯವಾಗಿತ್ತು. ಈಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಅವರ ವರ್ಚಸ್ಸು ಇದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ಮುಂದೆ ಠುಸ್ ಪಟಾಕಿ ಆಗಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಇದೀಗ ಮಾಜಿ ಶಾಸಕ ನೆರ್ಲಗುಂಟೆ ತಿಪ್ಪೇಸ್ವಾಮಿ ಶ್ರೀರಾಮುಲು ಬದ್ಧ ವೈರಿಯಾಗಿದ್ದು, ಅವರು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದು ಕಾಂಗ್ರೆಸ್‌ಗೆ ಬಲ ತುಂಬ ಬಹುದು. ಹಾಗಂತ ಬಿಜೆಪಿ ಸಾಮರ್ಥ್ಯವನ್ನೂ ಕಡೆಗಣಿಸುವಂತಿಲ್ಲ ಎನ್ನುವ ಮಾತುಗಳು ಇವೆ.
ಇನ್ನು ಪರಾಜಿತ ಅಭ್ಯರ್ಥಿ ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ, ಯುವ ನಾಯಕ ಡಾ. ಯೋಗೀಶ್ ಬಾಬು ವಿಧಾನಸಭೆ ಕ್ಷೇತ್ರದಲ್ಲಿ ಸೋಲು ಕಂಡರೂ ಕ್ಷೇತ್ರದ ಜನರ ಒಡನಾಟದಲ್ಲಿ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗುವ ಸಾಧ್ಯತೆಯಿದೆ.
ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆದ್ದ ನಂತರ ಜನರ ಕೈಗೆ ಸಿಗದೇ ಬರೀ ಆಪರೇಷನ್ ಕಮಲ, ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬ ಹಠದಲ್ಲಿ ಕ್ಷೇತ್ರದ ಜನರನ್ನು ಮರೆತಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ. ವಿಧಾನಸಭೆಯಲ್ಲಿ ಶ್ರೀರಾಮುಲು ಅವರ ಕ್ಯಾನ್ವಸ್ ಪರಿಣಾಮ ಬೀರಿದಷ್ಟು ಈ ಚುನಾವಣೆಯಲ್ಲಿ ಪರಿಣಾಮ ಬೀರದು ಎನ್ನಲಾಗುತ್ತಿದೆ.