ಚಿತ್ರದುರ್ಗ: ಪ್ರತಿ ದಿನ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಭಾರತ ಸೇರಿದಂತೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಹೈದರಾಬಾದ್ ವೈದ್ಯರೊಬ್ಬರು ಕೊರೊನಾಗೆ ಲಸಿಕೆ ಕಂಡುಹಿಡಿದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದುವರೆಗೂ ಈ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಈ ನಡುವೆ ಚಿತ್ರದುರ್ಗದಲ್ಲಿ ಕೊರೊನಾಗೆ ಆಯುರ್ವೇದಿಕ್ ಗಿಡಮೂಲಿಕೆಗಳ ಔಷಧಿ ಲಭ್ಯವಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಮಾರಣಾಂತಿಕ ಕಾಯಿಲೆಗೆ ಯಾವುದೇ ಔಷಧಿ ಇಲ್ಲ ಎಂದು ಜಿಲ್ಲಾ ಆಯುಷ್ ಅಧಿಕಾರಿ ಕೆ.ಎಲ್. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ. ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇತಂಹ ವದಂತಿಗಳಿಗೆ ಜನರು ಗಮನ ಹರಿಸುವ ಬದಲು ಮನೆಯಲ್ಲೇ ಇದ್ದು ಲಾಕ್ಡೌನ್ ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಪೌಷ್ಠಿಕಾಂಶ, ನಾರಿನಾಂಶ, ವಿಟಮಿನ್ 'ಸಿ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸಿ. ಅಲ್ಲದೆ ತುಳಸಿ, ದಾಲ್ಚಿನ್ನಿ, ಮೆಣಸು, ಅರಿಶಿನ, ಕರಿಬೇವು, ಶುಂಠಿಯನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು. ಪಾಲಕ್, ನುಗ್ಗೆ, ನೆಲ್ಲಿಕಾಯಿ, ಹಣ್ಣುಗಳ ಸೇವನೆಯಿಂದ ಕೂಡಾ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇವೆಲ್ಲವೂ ಮನೆಯಲ್ಲಿ ದೊರೆಯುವ ಪದಾರ್ಥಗಳೇ ಆಗಿದ್ದು, ಈ ರೀತಿಯ ಆಹಾರ ಪದಾರ್ಥಗಳನ್ನು ಆರೋಗ್ಯವೃದ್ಧಿಗೆ ಯಾವ ರೀತಿ ಬಳಸಬೇಕು ಎನ್ನುವ ಬಗ್ಗೆ ಜಿಲ್ಲೆಯಲ್ಲಿರುವ 36 ಆಯುಷ್ ಆಸ್ಪತ್ರೆಗಳು ಪ್ರತಿ ವರ್ಷ 2- 3 ಕ್ಯಾಂಪ್ ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಪ್ರಚಾರ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.