ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಆಡಳಿತದ ವ್ಯಾಪ್ತಿಯಲ್ಲಿ ಬರುವ ಗೋಶಾಲೆಗಳಲ್ಲಿ ಕೂಲಿ ಮಾಡಿರುವ ಕೂಲಿ ಕಾರ್ಮಿಕರಿಗೆ ತಾಲೂಕು ಆಡಳಿತ ಕೂಲಿ ನೀಡದೆ ಸತಾಯಿಸುತ್ತಿದ್ದು, ಕಾರ್ಮಿಕರು ಜೀವನ ನಡೆಸಲಾಗದೆ ಬೇಸತ್ತು ಜಿಲ್ಲಾಧಿಕಾರಿ ಕಚೇರಿಯ ಕದ ತಟ್ಟಿದ್ದಾರೆ.
ಬರಪೀಡಿತ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಕೂಲಿಗಾರರು ಕೂಲಿ ಸಿಗದೆ ಹೈರಾಣಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸ ಕಾರ್ಯಗಳಿಲ್ಲದ ವೇಳೆ ದಿಕ್ಕು ತೋಚದ ಕೂಲಿ ಕಾರ್ಮಿಕರಿಗೆ ಮೊಳಕಾಲ್ಮೂರು ತಾಲೂಕು ಆಡಳಿತ ಎರಡು ಗೋಶಾಲೆಗಳಲ್ಲಿ ಕೆಲಸ ನೀಡಿ ಕೂಲಿ ನೀಡುವುದಾಗಿ ಮಾತು ನೀಡಿತ್ತು. ಅದರೆ, ಆರು ತಿಂಗಳ ಕಾಲ ಮಾರಮ್ಮನ ಹಳ್ಳಿ ಹಾಗೂ ಮುತ್ತಿಗಾರನ ಹಳ್ಳಿಯಲ್ಲಿರುವ ಗೋಶಾಲೆಗಳನ್ನು ಕೂಲಿ ಮಾಡಿರುವ ಕೂಲಿ ಕಾರ್ಮಿಕರಿಗೆ ತಾಲೂಕು ಆಡಳಿತ ಪಗಾರ ನೀಡಿಲ್ಲ ಎಂದು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ 21 ಮಂದಿ ಹಾಗೂ ಮಾರಮ್ಮನಹಳ್ಳಿ ಗೋಶಾಲೆಯಲ್ಲಿ 15 ಮಂದಿ ಕೂಲಿ ಕೆಲಸ ಮಾಡಿದ್ದು, ಒಟ್ಟು 36 ಮಂದಿಗೆ ಕೂಲಿ ದೊರಕಬೇಕಾಗಿದೆ.
ಜೀವನ ನಡೆಸಲೂ ಹಣವಿಲ್ಲದೆ ಕೂಲಿ ಕಾರ್ಮಿಕರು ಪರದಾಡುತ್ತಿದ್ದು, ಸಾಕಷ್ಟು ಬಾರಿ ತಾಲೂಕು ಕಚೇರಿಗೆ ಭೇಟಿ ನೀಡಿದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲವಂತೆ. ಇದರಿಂದ ಬೇಸತ್ತ ಕೂಲಿ ಕಾರ್ಮಿಕರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮೌನ ಫ್ರತಿಭಟನೆ ಮಾಡಿ ಆರು ತಿಂಗಳ ಪೂರ್ಣ ಕೂಲಿ ನೀಡುವಂತೆ ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಿದರು.