ಚಿತ್ರದುರ್ಗ: ಇಂದು ಜಿಲ್ಲಾ ಪಂಚಾಯತಿ ಸಿಇಒ ಸತ್ಯಭಾಮರವರ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಬೇಸ್‍ಲೈನ್ ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ಕುಟುಂಬಗಳಿಗೆ ಸಂಬಂಧಿಸಿದಂತೆ ಇನ್ನೂ 18 ಸಾವಿರ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಈ ಪೈಕಿ 10 ಸಾವಿರ ಶೌಚಾಲಯ ನಿರ್ಮಾಣವಾಗಿದ್ದು, ಇನ್ನೂ 8 ಸಾವಿರ ಬಾಕಿ ಇದೆ. ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ತೋರಿಸದ ಜಿಲ್ಲೆಯ 05 ಗ್ರಾಮ ಪಂಚಾಯತಿ ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಾ.ಪಂ. ಗಳಿಗೆ 14 ನೇ ಹಣಕಾಸು ಆಯೋಗದ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎ ಎಂದರು.
ನಗರಕ್ಕೆ ಸಮೀಪವಿರುವ ಮದಕರಿಪುರ ಗ್ರಾ.ಪಂ.ನಲ್ಲಿ ಶೌಚಾಲಯ ನಿರ್ಮಾಣದಲ್ಲಿ ಅಲ್ಲಿನ ಪಿಡಿಒ ಆಸಕ್ತಿ ತೋರದ ಕಾರಣದಿಂದ ಈಗಾಗಲೆ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಇಲ್ಲಿನ 14 ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆಗೆ ಅನುಮೋದನೆಯನ್ನು ತಡೆ ಹಿಡಿಯಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯರುಗಳು, ಶೌಚಾಲಯ ನಿರ್ಮಾಣವಾಗಿಲ್ಲ ಎಂಬ ಒಂದೇ ಕಾರಣಕ್ಕೆ ಅನುಮೋದನೆ ತಡೆಹಿಡಿಯುವುದು ಸರಿಯಲ್ಲ. ಮಾರ್ಚ್ ನಂತರ ಅನುದಾನ ವಾಪಸ್ ಹೋಗಿ ಗ್ರಾ.ಪಂ. ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಮ್ಮತಿಸಿದ ಸಿಇಒ, ಶೌಚಾಲಯ ನಿರ್ಮಾಣದಲ್ಲಿ ಸಾಧನೆ ತೋರುವ ಬಗ್ಗೆ ಕ್ರಮ ವಹಿಸಿದಲ್ಲಿ, ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.