ಚಿತ್ರದುರ್ಗ: ಜಿಲ್ಲೆಯು ಬುಡಕಟ್ಟು ಸಂಸ್ಕೃತಿಯ ತವರು. ದೇವರ ಹೆಸರಿನಲ್ಲಿ ಜನ ಹಸುಗಳನ್ನ ದಾನ ಕೊಡುವ ಪದ್ದತಿ ಇನ್ನೂ ಜೀವಂತವಿದೆ. ಆದರೆ, ಪ್ರಾಣ ಹೋಗ್ತಿರುವಾಗ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಿದ್ರೇ ದೇವರಿಗೆ ಕೋಪ ಬರುತ್ತಂತೆ. ಅದಕ್ಕಾಗಿ ದೇವರಿಗೆ ಬಿಟ್ಟು ಹಸುಗಳು ಈಗ ಪ್ರಾಣ ಕಳೆದುಕೊಳ್ತಿವೆ.
ಕೋಟೆಗಳ ನಾಡು ಚಿತ್ರದುರ್ಗ ಕಾದ ಕಾವಲಿಯಂತಾಗಿದೆ. ದೇವರ ಹಸುಗಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಾಡುತ್ತಿದೆ. ಆದರೆ, ಮೌಢ್ಯಕ್ಕೆ ಜೋತುಬಿದ್ದ ದೇವರ ಹಸುಗಳನ್ನು ಸಾಕುವ ಕಿಲಾರಿ ಜೋಗಯ್ಯಗಳು, ಇವುಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ತೀವ್ರ ಬರ ಇರುವುದರಿಂದ ಜಿಲ್ಲೆಯಲ್ಲಿ ನಾಲ್ಕು ಗೋಶಾಲೆ ತೆರೆಯಲಾಗಿದೆ. ಗೋಶಾಲೆಗಳಿಗೂ ಇವುಗಳನ್ನ ಸಾಗಿಸುತ್ತಿಲ್ಲ. ಹಸು-ಕರುಗಳನ್ನ ಬಯಲಿನಲ್ಲಿ ಮೇಯಿಸುವ ಕಿಲಾರಿ ಜೋಗಯ್ಯಗಳು ರಾತ್ರಿ ರೊಪ್ಪಗಳಲ್ಲಿ ಬಿಡುತ್ತಾರೆ. ಅಪ್ಪಿತಪ್ಪಿಯೂ ದೇವರ ಹಸುಗಳನ್ನ ಯಾರೊಬ್ಬರೂ ಮುಟ್ಟುವಂತಿಲ್ಲ. ಇವುಗಳ ಹಾಲು, ಗೊಬ್ಬರದಿಂದ ಬರುವ ಹಣದಲ್ಲೇ ಕಿಲಾರಿಗಳು ಬದುಕು ಕಂಡ್ಕೊಂಡಿದ್ದಾರೆ. ಆದರೆ, ದೇವರಿಗೆ ಬಿಟ್ಟ ಹಸು-ಕರುಗಳಿಗೆ ರೋಗ ತಗುಲಿದ್ರೇ, ಚಿಕಿತ್ಸೆ ಕೊಡಿಸೋದಿಲ್ಲ. ಹೀಗೆ ಚಿಕಿತ್ಸೆ ಕೊಡಿಸುವುದು ಪಾಪವಂತೆ.
ಚಳ್ಳಕೆರೆ ತಾಲೂಕಿನಲ್ಲಿ ಈಗಾಗಲೇ 2 ಹಸು ನಿತ್ರಾಣಗೊಂಡಿವೆ. ಅನಾರೋಗ್ಯ ಪೀಡಿತ ಹಸುವಿಗೆ ಚಿಕಿತ್ಸೆ ಕೊಡಿಸದ ಕಾರಣ, ಅದು ಈಗ ಅಸುನೀಗಿದೆ. ಸರ್ಕಾರ ಮೇವು ನೀಡದ ಕಾರಣಕ್ಕೆ ಆಹಾರವಿಲ್ಲದೇ ಜಾನುವಾರುಗಳು ಸಾವನ್ನಪ್ಪುತ್ತಿವೆ ಅಂತಾ ಕಿಲಾರಿಗಳು ಆರೋಪಿಸ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅಧಿಕಾರಿಗಳಿಂದ ಮೇವು ಇಲ್ಲ ಪೌಷ್ಠಿಕಾಂಶವುಳ್ಳ ಆಹಾರ ಅಥವಾ ಚಿಕಿತ್ಸೆಯ ನೆರವನ್ನ ಕಿಲಾರಿಗಳು ಕೇಳಿಲ್ಲ. ಕಿಲಾರಿ ಜೋಗಯ್ಯಗಳ ಬೇಜವಾಬ್ದಾರಿಯಿಂದಾಗಿ ಮೂಕ ಪ್ರಾಣಿಗಳು ಜೀವ ಕಳೆದುಕೊಳ್ತಿವೆ.
ಹಿರಿಯ ಅಧಿಕಾರಿಗಳೇ ಕಣ್ಣಾರೆ ಕಂಡಿರೋ ಸತ್ಯ:
ಚಳ್ಳಕೆರೆ ತಾಲೂಕಿನ ಬೊಮ್ಮದೇವರಹಟ್ಟಿಯ ರೊಪ್ಪದಲ್ಲಿ ಸುಮಾರು 400ಕ್ಕೂ ಹೆಚ್ಚು ಜಾನುವಾರುಗಳಿವೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದ ತಂಡ ಭೇಟಿ ನೀಡಿ ವಾಸ್ತವದ ಸ್ಥಿತಿ ಪರಿಶೀಲಿಸಿದರು. ಜಾನುವಾರುಗಳ ಸಂಖ್ಯೆ ಹೆಚ್ಚಾಗಿವೆ. ಇದರಿಂದ ಸ್ವಲ್ಪ ಮೇವಿನ ಕೊರತೆಯಾಗಿದೆ ನಿಜ. ಆದರೆ, ಇದರಿಂದಾಗಿ ಇಲ್ಲಿ ಪ್ರಾಣಿಗಳು ಸಾಯುತ್ತಿಲ್ಲ. ಸರಿಯಾದ ಚಿಕಿತ್ಸೆ ನೀಡದ ಕಾರಣ ಅಸುನೀಗಿವೆ. ಇಲ್ಲೇ ಗೋಶಾಲೆ ತೆರೆದು ಮೇವು ಹಾಗೂ ಆರೋಗ್ಯ ತಪಾಸಣೆ ನಡೆಸ್ತೀವಿ ಅಂತಿದ್ದಾರೆ ಅಧಿಕಾರಿಗಳು.
ಜೀವ ಉಳಿಸಲು ಚಿಕಿತ್ಸೆ ಕೊಟ್ರೇ ದೇವರ ಕೋಪ-ಶಾಪವೂ ಇಲ್ಲ:
ವಿಶೇಷ ಅಂದ್ರೇ ಧ್ಯಾನ್ ಫೌಂಡೇಶನ್, ಇನ್ಫೋಸಿಸ್ ಸುಧಾ ಮೂರ್ತಿಯವರು ಮೇವು ಹಾಗೂ ಪಶು ಆಹಾರವನ್ನೂ ಉಚಿತವಾಗಿ ಪೂರೈಸುತ್ತಿದ್ದಾರೆ. ಇಷ್ಟಿದ್ದರೂ ಜಾನುವಾರುಗಳು ಸಾವನ್ನಪ್ಪುತ್ತಿರೋದಕ್ಕೆ ಕಿಲಾರಿ ಜೋಗಯ್ಯಗಳೇ ಕಾರಣ ಅನ್ನೋದು ಸ್ಪಷ್ಟ. ಇದೊಂದೇ ತಾಲೂಕಿನಲ್ಲಿ ಸುಮಾರು 1,021 ದೇವರ ಹಸುಗಳಿವೆ. ಇವುಗಳಿಂದ ಹಣ ಮಾಡುವ ಕಿಲಾರಿಗಳು, ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮೌಢ್ಯತೆ ಅನುಸರಿಸಿ ಅಮಾಯಕ ಜೀವಗಳ ಹಾನಿಗೆ ಕಾರಣವಾಗ್ತಿರೋದನ್ನ ಅದ್ಯಾವ ದೇವರೂ ಮೆಚ್ಚೋದಿಲ್ಲ.