ಚಿತ್ರದುರ್ಗ : ಇಡೀ ಕರ್ನಾಟಕದ ಜನತೆಗೆ ಜೀವನ ಮುಖ್ಯ ಅಲ್ಲ, ಜೀವ ಮುಖ್ಯವಾಗಿದೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ಸಂಸದ ನಾರಾಯಣ ಸ್ವಾಮಿ ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆಕ್ಸಿಜನ್, ರೆಮ್ಡಿವಿಸಿರ್ ಹಾಗೂ ಬೆಡ್ ಸಮಸ್ಯೆ ಖಂಡಿತಾ ಇದೆ. ಅದನ್ನು ನಾವು ಒಪ್ಪುತ್ತೇವೆ. ಆದರೆ, ಜನರಲ್ಲಿ ಸ್ಯಾಚುರೇಶನ್ ಲೆವೆಲ್ 92ಕ್ಕೂ ಹೆಚ್ಚು ಇದ್ದಾಗ ಐಸಿಯೂ ಅವಶ್ಯಕತೆ ಇಲ್ಲ.
ಇದನ್ನು ನಿಭಾಯಿಸುವಲ್ಲಿ ಸರ್ಕಾರ ಹಾಗೂ ಆಸ್ಪತ್ರೆಗಳು ವಿಫಲವಾಗುತ್ತಿವೆ. ಸ್ಯಾಚುರೇಶನ್ ಲೆವೆಲ್ ಹೆಚ್ಚು ಇರುವವರಿಗೂ ಐಸಿಯೂ ಬೆಡ್ ಬೇಕೆಂಬ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಸ್ಯಾಚುರೇಶನ್ 92 ಇದ್ದವರಿಗೂ ರೆಮ್ಡಿಸಿವಿರ್ ಕೊಡುತ್ತಿರುವುದರಿಂದ ಕೊರತೆ ಉಂಟಾಗಿದೆ. ರೆಮ್ಡಿಸಿವಿರ್ ಕೊರತೆ ನೀಗಿಸಲು ಗುಜರಾತ್ ಮೂಲದ ಕಂಪನಿಯಿಂದ ಪರ್ಯಾಯ ಔಷಧಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ನಾವು ರೆಮ್ಡಿಸಿವಿರ್ ಅಲ್ಟಿಮೇಟ್ ಅಲ್ಲ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕಿದೆ. ಒಟ್ಟಾರೆ ಸಮಸ್ಯೆಯನ್ನು ನೋಡಿದಾಗ ಬೆಂಗಳೂರು ಹಾಗು ಮಹಾನಗರಗಳಿಗೆ ಲಾಕ್‌ಡೌನ್ ಅವಶ್ಯವಾಗಿ ಮಾಡಬೇಕಿದೆ.
ಸಮಸ್ಯೆಗಳನ್ನ ಯಾರೆ ಸೃಷ್ಟಿಸಿರಲಿ, ಜನರ ಅವಶ್ಯಕತೆ ಪೂರೈಸೋದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳು ಇವತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ. ವ್ಯಾಕ್ಸಿನ್ ಉತ್ಸವ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು.
ಆ ವ್ಯಾಕ್ಸಿನ್ ಉತ್ಸವ ಕೇವಲ ಪತ್ರಿಕೆ ಮತ್ತು ಟಿವಿ ಮಾದ್ಯಮಗಳಲ್ಲಿ ಕೇಳಿ ಬಂತು. ಅದು ಬಿಟ್ಟರೇ ವ್ಯಾಕ್ಸಿನ್ ಉತ್ಸವವನ್ನು ಸರ್ಕಾರ ಮತ್ತು ಸಮಾಜ ಮಾಡಿದ್ದನ್ನು ನಾನು ನೋಡಲಿಲ್ಲ. ಸರ್ಕಾರ ಎಲ್ಲೆಲ್ಲಿ ಕೈಗಾರಿಕೆ, ವಾಣಿಜ್ಯೋದ್ಯಮ ಇರುವ ಕಡೆ ತೆರಳಿ ಲಸಿಕೆ ನೀಡಬೇಕಿತ್ತು ಎಂದು ಸಂಸದ ನಾರಾಯಣ್ ಸ್ವಾಮಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರ ಹಾಕಿದರು.