ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಇಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಬಳಿಯಿಂದ ಆರಂಭವಾಗಿದೆ.
ಚಳ್ಳಕೆರೆ ತಾಲೂಕಿಗೆ ಆಗಮಿಸುತ್ತಿದ್ದಂತೆ ಲಂಬಾಣಿ ಮಹಿಳೆಯರು ನೃತ್ಯದ ಮೂಲಕ ಅದ್ಧೂರಿಯಾಗಿ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದರು. ಬಳಿಕ ವಿದ್ಯಾರ್ಥಿನಿಯೋರ್ವಳು ರಸ್ತೆಯಲ್ಲಿ ಭರತನಾಟ್ಯ ಪ್ರದರ್ಶಿಸಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನ ಹೆಚ್ಚಿಸಿದಳು. ಬಳಿಕ ರಾಹುಲ್ ಗಾಂಧಿ ಅವರು ಮಕ್ಕಳ ಕೈಹಿಡಿದು ಹೆಜ್ಜೆ ಹಾಕುವ ಮೂಲಕ ಮುಂದಿನ ಉಜ್ವಲ ಭವಿಷ್ಯಕ್ಕೆ ಇದಿನಿಂದಲೇ ಭದ್ರ ಬುನಾದಿ ಅಗತ್ಯವೆಂಬ ಸಂದೇಶ ಸಾರಿದರು.
ಈ ವೇಳೆ ರಾಹುಲ್ ಗಾಂಧಿ ಪೌರ ಕಾರ್ಮಿಕೊರೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡು ಆತ್ಮೀಯವಾಗಿ ಮಾತನಾಡಿದರು. ಜತೆಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪೌರಕಾರ್ಮಿಕ ಹೇಳುತ್ತಿದ್ದ ವಿಚಾರಗಳನ್ನು ರಾಹುಲ್ ಗಾಂಧಿಗೆ ವಿವರಿಸುತ್ತಿದ್ದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭಾರತ್ ಜೋಡೋ ಪಾದಯಾತ್ರೆ ಆರಂಭ
ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು, ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಾಥ್ ನೀಡುತ್ತಿದ್ದಾರೆ. ಜೊತೆಗೆ ಡೊಳ್ಳು, ತಮಟೆ, ಲಂಬಾಣಿ ನೃತ್ಯ, ಗಾರುಡಿ ಗೊಂಬೆ ಸೇರಿದಂತೆ ಅನೇಕ ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದವು.